ಮಂಗಳೂರು| ಸುಳ್ಳು ಸುದ್ದಿಯ ವಿಡಿಯೋ ಪೋಸ್ಟ್: "PRAKARA TV" ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಅ.10: ಇನ್‌ಸ್ಟ್ರಾಗ್ರಾಮ್‌ನಲ್ಲಿ PRAKARA TV ಎಂಬ ಹೆಸರಿನ ಅಕೌಂಟ್‌ನಲ್ಲಿ ಕಾಸರಗೋಡು ಜಿಲ್ಲೆಯ ಕುಂಬ್ಳೆ ತಾಲೂಕಿನ ಸೀತಂಗೋಳಿ ಎಂಬಲ್ಲಿ ಯುವಕರ ನಡುವೆ ನಡೆದ ಹಲ್ಲೆಯ ವಿಡಿಯೋದ ಮೇಲೆ "ಮಂಗಳೂರು: ನಡುರಸ್ತೆಯಲ್ಲೇ ಗ್ಯಾಂಗ್‌ವಾರ್, ಯುವಕನ ಕುತ್ತಿಗೆಯಲ್ಲೇ ಉಳಿದುಕೊಂಡ ಡ್ರ್ಯಾಗರ್" ಎಂಬುದಾಗಿ ಬರೆದು ಪ್ರಸಾರ ಮಾಡಿದ ಆರೋಪದ ಮೇಲೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕದ್ರಿ ಠಾಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಕರ್ತವ್ಯವನ್ನು ನಿರ್ವಹಿಸಿಕೊಂಡಿರುವ ನಾಗರಾಜ್ ಅ.9ರಂದು ಮಧ್ಯಾಹ್ನ 1ಕ್ಕೆ ಕದ್ರಿ ಪಾರ್ಕ್‌ನಲ್ಲಿ ಕರ್ತವ್ಯದಲ್ಲಿರುವ ವೇಳೆ ಇನ್‌ಸ್ಟ್ರಾಗ್ರಾಮ್ ಪರಿಶೀಲಿಸುತ್ತಿರುವಾಗ ಸಿತಾಂಗೋಳಿಯಲ್ಲಿ ನಡೆದ ಕೃತ್ಯವು ಮಂಗಳೂರಿನಲ್ಲಿ ನಡೆದಿದೆ ಎಂಬಂತೆ ಬಿಂಬಿಸುವಂತೆ ಸುಳ್ಳು ಸುದ್ದಿಯ ವಿಡಿಯೋವನ್ನು ಪೋಸ್ಟ್ ಮಾಡಿರುವುದನ್ನು ಕಂಡಿದ್ದಾರೆ. ಇದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಅಲ್ಲದೆ ಬೇರೆ ಬೇರೆ ಸಮುದಾಯ ಅಥವಾ ಗ್ಯಾಂಗ್‌ಗಳ ನಡುವೆ ದ್ವೇಷ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಅಪಾಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.





