ಮಂಗಳೂರು | ಎ.21ರಿಂದ ಕಸ ವಿಂಗಡಿಸಿ ನೀಡದಿದ್ದರೆ ದಂಡ : ಪಾಲಿಕೆ ಆಯುಕ್ತ

ಮಂಗಳೂರು : ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಹಸಿ ಹಾಗೂ ಒಣ ತ್ಯಾಜ್ಯವನ್ನು ವಿಂಗಡನೆ ಮಾಡಿ ನೀಡುವಂತೆ ಸೂಚನೆ ನೀಡಲಾಗಿದೆ. ಅದಾಗ್ಯೂ ಅದನ್ನು ಪಾಲಿಸಲಾಗುತ್ತಿಲ್ಲ. ಆದ್ದರಿಂದ ಎ.21ರಿಂದ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡದೆ ಇದ್ದರೆ ದಂಡ ವಿಧಿಸಲಾಗುವುದು. ಆರಂಭಿಕವಾಗಿ 500 ರೂ.ನಿಂದ 15 ಸಾವಿರ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪೌರ ಕಾರ್ಮಿಕರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರೂ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಮನೆಗಳಿಂದ ಹಸಿ, ಒಣ ಹಾಗೂ ಸ್ಯಾನಿಟರಿ ಎಂಬಂತೆ ಪ್ರತ್ಯೇಕವಾಗಿ ತ್ಯಾಜ್ಯ ವಿಂಗಡಿಸಿ ಸಂಗ್ರಹಿಸಲಾಗುತ್ತದೆ. ಇದರ ಉಲ್ಲಂಘನೆ ಕಂಡು ಬಂದಲ್ಲಿ ಮನೆಯ ಎದುರು ಅಳವಡಿಸಿದ ಕ್ಯೂ ಆರ್ ಕೋಡ್ ಮೂಲಕ ಫೋಟೋ ಸ್ಕ್ಯಾನ್ ಮಾಡಿ ಪಾಲಿಕೆ ಗಮನಕ್ಕೆ ತರಬೇಕು. ಇದರ ಆಧಾರದಲ್ಲಿ ವಿಂಗಡನೆ ಮಾಡದೆ ನೀಡುವವರ ಮೇಲೆ ದಂಡ ವಿಧಿಸಲಾಗುವುದು ಎಂದು ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
ನಗರದಲ್ಲಿ ಪ್ರತಿನಿತ್ಯ 200 ಮೆಟ್ರಿಕ್ ಟನ್ ಕಸ ಸಂಗ್ರಹವಾಗುತ್ತದೆ. ಎ.21ರಿಂದ ಹಸಿ ಕಸ, ಒಣಕಸ ಹಾಗೂ ಸ್ಯಾನಿಟರಿ ಕಸವನ್ನು ಪ್ರತ್ಯೇಕವಾಗಿ ನೀಡದಿದ್ದರೆ ದಂಡ ವಿಧಿಸಲಾಗುವುದು. ಆರಂಭದಲ್ಲಿ ಹಣದ ಮೂಲಕ ದಂಡ ಸಂಗ್ರಹಿಸಲಾಗುತ್ತದೆ. ಮತ್ತೆಯೂ ತ್ಯಾಜ್ಯ ಪ್ರತ್ಯೇಕಿಸಿ ನೀಡದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು. ಮನೆಗಳಿಗೆ ನೀಡಲಾಗಿದ್ದ ಕ್ಯೂಆರ್ ಕೋಡ್ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕಾರ್ಮಿಕರಿಗೆ ನೀಡಿದ ಡಿವೈಸ್‌ಗಳು ಸರಿಯಾಗಿಲ್ಲ ಈ ಕಾರಣದಿಂದ ಮೊಬೈಲ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರಸಕ್ತ 90 ಸಾವಿರ ಸ್ಥಳಗಳಲ್ಲಿ ಕೋಡ್ ಇದೆ ಅವುಗಳಲ್ಲಿ ಸ್ಕ್ಯಾನ್ ಮಾಬೇಕು. ಜತೆಗೆ ನಗರದ ಬ್ಲಾಕ ಸ್ಟಾಪ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕ್ರಮ ವಹಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ.
ತ್ಯಾಜ್ಯ ವಿಂಗಡನೆ ಸಂದರ್ಭದಲ್ಲಿ ಕಸದ ಜತೆ ಪ್ಯಾಂಪರ್ಸ್, ಡೈಪರ್ಸ್ ಸೇರಿಸಿ ನೀಡಲಾಗುತ್ತದೆ. ಅವುಗಳನ್ನು ಪ್ರತ್ಯೇಕಿಸಿ ನೀಡಬೇಕಿದೆ. ಕಾರ್ಮಿಕರು ಅವುಗಳನ್ನು ಬಿಚ್ಚಿ ಕೈಹಾಕಿ ನೋಡಬೇಕಾದ ಅನಿವಾರ್ಯತೆ ಇದೆ ಎಂದು ಪೌರ ಕಾರ್ಮಿಕರೊಬ್ಬರು ಸಭೆಯ ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಪ್ರತಿಕ್ರಿಯಿಸಿ, ಕಸ ಸಂಗ್ರಹದ ವೇಳೆ ಫೋಟೋ ತೆಗೆದುಕೊಳ್ಳಿ. ಪ್ರತ್ಯೇಕಿಸದೆ ನೀಡಿದ್ದಲ್ಲಿ ಇಲಾಖೆ ಗಮನಕ್ಕೆ ತಂದು ಇಲಾಖೆಯ ಮೂಲಕ ಹಾಗೂ ಸ್ವಯಂ ಸೇವಕರ ಮೂಲಕ ಅವರಿಗೆ ತಿಳುವಳಿಕೆ ಮೂಡಿಸಲಾಗುವುದು. ಮತ್ತೆಯೂ ಎಚ್ಚೆತ್ತುಕೊಳ್ಳದಿದ್ದರೆ ಪಾಲಿಕೆ ಕ್ರಮ ವಹಿಸಲಿದೆ ಎಂದರು.
ಪ್ಯಾಂಪಸ್, ಡೈಪರ್ಸ್‌ಗಳನ್ನು ಯಾವುದೇ ಕಾರಣಕ್ಕೂ ಹಸಿ ಕಸದೊಂದಿಗೆ ನೀಡುವಂತಿಲ್ಲ. ಮನೆಯವರು ಅವುಗಳನ್ನು ಪ್ರತ್ಯೇಕವಾಗಿಯೇ ನೀಡಬೇಕು ಎಂದು ತುಳಸಿ ಮದ್ದಿನೇನಿ ಹೇಳಿದರು. ಪ್ರತಿನಿತ್ಯ ಕಸ ವಿಗಡಿಸಿ ಸಂಗ್ರಹ ಮಾಡುವುದು ಕಡ್ಡಾಯವಾಗಿದ್ದು, ಸ್ಕ್ಯಾನ್ ಮತ್ತು ಪೋಟೋ ತೆಗೆಯಬೇಕು. ಕನಿಷ್ಟ ಶೇ.80ರಷ್ಟು ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಮಾಸಿಕ 500 ರೂ. ಭತ್ಯೆ ನೀಡಲಾಗುವುದು ಎಂದು ತುಳಸಿ ಮದ್ದಿನೇನಿ ಹೇಳಿದರು.
ಅಧಿಕಾರಿಗಳು ಪ್ರತಿ ವಾಹನಗಳನ್ನು ಗಮನಿಸಬೇಕು. ಮನೆಯಿಂದ ಸಂಗ್ರಹವಾಗುವ ಬಳಿಕ ಪ್ರತ್ಯೇಕವಾಗಿಯೇ ಕಾಂಪ್ಯಾಕ್ಟರ್ ಮೂಲಕ ರವಾನಿಸುವ ವ್ಯವಸ್ಥೆ ನಡೆಯಬೇಕು. ಸೀಯಾಳದ ಚಿಪ್ಪುಗಳನ್ನು ಹಸಿ ಕಸದೊಂದಿಗೆ ಸಂಗ್ರಹಿಸಬೇಕು. ದ.ಕ. ಜಿಲ್ಲೆಯಲ್ಲಿ ಮಲೇರಿಯಾ ಅಧಿಕವಾಗಿದ್ದು, ಎಳನೀರಿನ ಚಿಪ್ಪು ಮನೆಗಳಲ್ಲಿ ಇರಿಸಿದ್ದಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಅವುಗಳನ್ನು ಮನೆಗಳಲ್ಲಿ ಇಡುವಂತಿಲ್ಲ ಎಂದು ತುಳಸಿ ಮದ್ದಿನೇನಿ ಸಲಹೆ ನೀಡಿದರು.