ಮಂಗಳೂರು| ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ

ಮಂಗಳೂರು, ಜ.17: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರವೆಸಗಿ ಅದನ್ನು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೊ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮಾನು ಕೆ.ಎಸ್. 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹೆಬ್ರಿ ಮುದ್ರಾಡಿಯ ಅಶ್ವತ್ಥ್ (22) ಶಿಕ್ಷೆಗೊಳಗಾದ ಆರೋಪಿ.
ಇನ್‌ಸ್ಟಾಗ್ರಾಂ ಮೂಲಕ ಬಾಲಕಿಯ ಸ್ನೇಹ ಬೆಳೆಸಿದ ಅಶ್ವತ್ಥ್ ಆಕೆಯನ್ನು ಭೇಟಿಯಾಗುವಂತೆ ಪುಸಲಾಯಿಸಿ 2023ರ ಮಾರ್ಚ್‌ನಲ್ಲಿ ಮುಲ್ಕಿ ಬಸ್ ನಿಲ್ದಾಣದಿಂದ ಒತ್ತಾಯಪೂರ್ವಕವಾಗಿ ಬೈಕ್‌ನಲ್ಲಿ ಮಣಿಪಾಲದ ಲಾಡ್ಜ್‌ಗೆ ಕರೆದುಕೊಡು ಹೋಗಿ ಅತ್ಯಾಚಾರವೆಸಗಿದ್ದ. ಕೃತ್ಯವನ್ನು ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೆ ರವಾನಿಸಿದ್ದ. ಆ ವೀಡಿಯೋ ಬಾಲಕಿಯ ತಂದೆಗೂ ಬಂದಿತ್ತು. ಅದರಂತೆ ಅವರು ಮುಲ್ಕಿ ಠಾಣೆಗೆ ದೂರು ನೀಡಿದ್ದರು.
ಮುಲ್ಕಿ ಪೊಲೀಸ್ ನಿರೀಕ್ಷಕ ವಿದ್ಯಾಧರ್ ಡಿ.ಬಾಯ್ಕೇರಿಕರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 24 ಸಾಕ್ಷಿದಾರರನ್ನು ವಿಚಾರಿಸಿ 49 ದಾಖಲೆಗಳನ್ನು ಗುರುತಿಸಲಾಗಿತ್ತು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಶುಕ್ರವಾರ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ಅಶ್ವತ್ಥ್‌ನಿಗೆ ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೊಕ್ಸೊ ಕಾಯ್ದೆಯ ಕಲಂ 6ರಂತೆ 20 ವರ್ಷ ಗಳ ಕಠಿಣ ಶಿಕ್ಷೆ ಮತ್ತು 50,000 ರೂ. ದಂಡ, ಪೊಕ್ಸೊ ಕಾಯ್ದೆಯ ಕಲಂ 12ರಂತೆ 2 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ, ಭಾರತೀಯ ದಂಡ ಸಂಹಿತೆಯ ಕಲಂ 363ರಡಿ 3 ವರ್ಷಗಳ ಕಠಿಣ ಶಿಕ್ಷೆ ಮತ್ತು 5,000 ರೂ ದಂಡ. ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ಕಲಂ 67(ಬಿ) ಅಡಿ 3 ವರ್ಷಗಳ ಕಠಿಣ ಶಿಕ್ಷೆ ಮತ್ತು 40,000 ರೂ. ದಂಡ ವಿಧಿಸಿದ್ದಾರೆ.
ದಂಡದ ಮೊತ್ತ 1 ಲ.ರೂ.ವನ್ನು ನೊಂದ ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ ಪ್ರಕ್ರಿಯೆ ಸಂಹಿತೆಯ ಕಲಂ 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆಯಡಿ ಬಾಲಕಿಗೆ ಹೆಚ್ಚುವರಿಯಾಗಿ 4 ಲ.ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದಾರೆ.