ಮಂಗಳೂರು | ಗುರು-ಗಾಂಧಿ ಸಂವಾದ ಸಮಾಜದ ಮೇಲೆ ಅಗಾಧ ಪರಿಣಾಮ: ಗಣೇಶ್ ದೇವಿ

ಮಂಗಳೂರು, ಡಿ.3: ನೂರು ವರ್ಷದ ಹಿಂದೆ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧೀಜಿ ಅವರ ಮಧ್ಯೆ ನಡೆದ ಸಂವಾದವು ಸಮಾಜದ ಮೇಲೆ ಅಗಾಧ ಪರಿಣಾಮ ಬೀರಿತ್ತು. ಮುಖ್ಯವಾಗಿ ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಗೆ ಹೊಸ ಆಯಾಮ ನೀಡಿತ್ತು ಎಂದು ಸಂಸ್ಕೃತಿ ಚಿಂತಕ ಗಣೇಶ್ ದೇವಿ ಹೇಳಿದರು.
ಕೇರಳದ ವರ್ಕಳ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ಬುಧವಾರ ನಡೆದ ಸರ್ವಮತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತರು, ಹಿಂದುಳಿದ ವರ್ಗದ ಜನರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲದಂತಹ ಆ ಕಾಲದಲ್ಲಿ ಸಮಾಜದ ಪರಿವರ್ತನೆಗೆ ಮುಂದಾದ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಮಿಡಿದ ಮಹಾತ್ಮಾ ಗಾಂಧೀಜಿ ಅವರ ಆಶಯ ಮತ್ತು ಗುರಿ ಒಂದೇ ಆಗಿತ್ತು. ಇಬ್ಬರೂ ಅವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದರು. ಆ ಕಾಲದಲ್ಲಿ ದೇಶದಲ್ಲಿ ನಡೆದ ಅನೇಕ ಮಹತ್ವದ ಘಟನೆಗಳಿಗೆ ಆ ಸಂವಾದವು ಹೊಸ ದಿಕ್ಕನ್ನು ತೋರಿಸಿತು ಎಂದ ಗಣೇಶ್ ದೇವಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ, ಭಾವಚಿತ್ರಕ್ಕೆ ನಮನ ಸಲ್ಲಿಸುವುದು ಅಥವಾ ಬಿಡುವುದು ವೈಯಕ್ತಿಕ ವಿಚಾರವಾಗಿದೆ. ಆದರೆ ಅವರಿಬ್ಬರ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸುವ ಅಗತ್ಯವಿದೆ ಎಂದು ಗಣೇಶ್ ದೇವಿ ಹೇಳಿದರು.
ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಮಾತನಾಡಿ, ಜಾತಿ ವ್ಯವಸ್ಥೆ ಎಂಬುದು ಸಮಾಜಕ್ಕೆ ಅಂಟಿದ ಕ್ಯಾನ್ಸರ್ ರೋಗದಂತೆ. ಅದನ್ನು ಹೋಗಲಾಡಿಸಲು ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧೀಜಿ ಅವರ ಪ್ರಯತ್ನವನ್ನು ಇಂದಿನ ಪೀಳಿಗೆ ಅರ್ಥ ಮಾಡಿಕೊಳ್ಳಬೇಕಿದೆ. ಅವರಿಬ್ಬರ ಸಂವಾದವು ದೇಶದ ರಾಜಕೀಯ, ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಿದರು.
ಶಿರಸಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ವೀಣಾ ಬೆಹನ್ಜಿ ಮಾತನಾಡಿ, ಅಂಧಶ್ರದ್ಧೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಿದ್ದ ನಾರಾಯಣ ಗುರು ಮತ್ತು ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಿದ ಮಹಾತ್ಮಾ ಗಾಂಧೀಜಿಯ ಸಂದೇಶವು ಸಾರ್ವಕಾಲಿಕವಾದುದು. ಜಾತಿ, ಧರ್ಮದ ಹೆಸರಿನಲ್ಲಿ ನಮ್ಮಲ್ಲಾಗುವ ರಕ್ತಪಾತ ಜಗತ್ತಿನ ಯಾವ ರಾಷ್ಟ್ರದಲ್ಲೂ ಆಗುತ್ತಿಲ್ಲ. ಇದು ಮುಂದುವರಿಯಬಾರದು. ಜಗತ್ತು ಎಂಬುದು ಒಂದು ಕುಟುಂಬವಿದ್ದಂತೆ ಎಂಬ ಪ್ರಜ್ಞೆ ಸದಾ ನಮ್ಮಲ್ಲಿರಬೇಕು ಎಂದು ಆಶಿಸಿದರು.
ಹನೂರು ಬುದ್ಧ ವಿಹಾರದ ಭಿಕ್ಕು ಧಮ್ಮತಿಸ್ಸ ಅಶೋಕ ಆರಾಮ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧೀಜಿ ಅಸ್ಪ್ರಶ್ಯತೆಯ ವಿರುದ್ಧ ಹೋರಾಟ ಮಾಡಿದ್ದರು. ಆದರೂ ಇಂದಿಗೂ ಜಾತಿ ವ್ಯವಸ್ಥೆ ಮುಂದುವರಿದಿರುವುದು ವಿಷಾದನೀಯ. ಇಂತಹ ವಿಷಯಕ್ಕೆ ಸಂಬಂಧಿಸಿ ಅಂದು ಮತ್ತು ಇಂದು ಸಂದೇಶ ನೀಡುವವರಿಗೇನೂ ಈ ಸಮಾಜದಲ್ಲಿ ಕೊರತೆ ಇಲ್ಲ. ಆದರೆ ಅದನ್ನು ಅನುಷ್ಠಾನಗೊಳಿಸುವವರ ಸಂಖ್ಯೆ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.
ಶಿವಗಿರಿ ಮಠದ ಸ್ವಾಮಿ ಆಸಂಗಾನಂದ ಗಿರಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧೀಜಿಯ ಮಧ್ಯೆ ನಡೆದ ಅಂದಿನ ಆ ಸಂವಾದವು ವಾದಿಸಿ ಗೆಲ್ಲಲಲ್ಲ. ಅರಿಯಲು ನಡೆಸಿರುವಂತದ್ದಾಗಿದೆ. ಹಾಗಾಗಿ ನಾರಾಯಣ ಗುರುಗಳ ಸಂದೇಶವು ಕೇರಳ -ಕರ್ನಾಟಕಕ್ಕೆ ಸೀಮಿತವಾಗಬಾರದು. ದೇಶ-ವಿದೇಶಗಳಿಗೂ ವಿಸ್ತರಣೆಯಾಗಬೇಕು. ಅದಕ್ಕಾಗಿ ಶಿವಗಿರಿ ಮಠ ಶ್ರಮಿಸಲಿದೆ ಎಂದರು.
ಕೇರಳದ ಮಾಜಿ ಡಿಜಿಪಿ ಟಿ.ಪಿ. ಸೆನ್ ಕುಮಾರ್ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಟಿಪಳ್ಳ ನಾರಾಯಣ ಗುರು ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ದಯಾನಂದ ಸಾಲ್ಯಾನ್ರಿಗೆ ಶಿವಗಿರಿ ಮಠದ ಜ್ಞಾನೇಶ್ವರ ಸ್ವಾಮೀಜಿ ಬಹುಮಾನ ವಿತರಿಸಿದರು.
ಕೆ.ಕೆ. ರಾಮನ್ ಬರೆದ, ಡಾ. ಮೀನಾಕ್ಷಿ ರಾಮಚಂದ್ರ ಅನುವಾಸಿದ ದಿವ್ಯಬಿಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಎರ್ನಾಕುಳಂನ ಉದ್ಯಮಿ ಡಾ. ಫಾದ್ಲ್ ಎಚ್. ವೀರನ್ಕುಟ್ಟಿ, ತಿರುವನಂತಪುರಂನ ಉಪೇಂದ್ರನ್ ಕಾಂಟ್ರಾಕ್ಟರ್, ಉದ್ಯಮಿ ಅಶೋಕ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.







