ಮಂಗಳೂರು | ಮಾನವರಲ್ಲಿ ಸೌಹಾರ್ದ, ಸದ್ಭಾವನೆ ರಕ್ತಗತವಾಗಿರಬೇಕು : ಡಾ.ಶಿಖಾರಿಪುರ ಕೃಷ್ಣಮೂರ್ತಿ

ಮಂಗಳೂರು,ನ.23: ಜಗತ್ತಿನಲ್ಲಿರುವುದು ಮಾನವ ಧರ್ಮ ಮಾತ್ರ. ಉಳಿದವುಗಳೆಲ್ಲವೂ ಮತಗಳಾಗಿವೆ. ಧರ್ಮ ಮತ್ತು ಮತಗಳ ಮಧ್ಯೆ ಇರುವ ಈ ವ್ಯತ್ಯಾಸವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಮತ್ತು ಮಾನವರಲ್ಲಿ ಸೌಹಾರ್ದ, ಸದ್ಭಾವನೆಯು ರಕ್ತಗತವಾಗುವಂತಹ ವಾತಾವರಣವನ್ನು ರೂಪಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಶಿಖಾರಿಪುರ ಕೃಷ್ಣಮೂರ್ತಿ ಹೇಳಿದರು.
ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಇದರ ವತಿಯಿಂದ ನಗರದ ಕಾಸಿಯಾ ಚರ್ಚ್ ಹಾಲ್‌ನಲ್ಲಿ ರವಿವಾರ ನಡೆದ ದೀಪಾವಳಿ, ಈದ್, ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ, ಮತಗಳ ಹೆಸರಿನಲ್ಲಿ ಯಾವತ್ತೂ ಯಾರೂ ಕೂಡ ಜಗಳವಾಡಬಾರದು. ದ್ವೇಷ ಹುಟ್ಟಿಸಬಾರದು. ಒಳಿತು ಮತ್ತು ಕೆಡುಕಿನ ತಿಳುವಳಿಕೆ ಪ್ರತಿಯೊಬ್ಬರಲ್ಲಿದ್ದರೂ ಕೂಡ ಜನರನ್ನು ಒಡೆದು ಆಳುವ ಪ್ರಯತ್ನಗಳು ಸಮಾಜದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಸಮಾಜಕ್ಕೆ ಹಾನಿಯಾಗಲಿದೆಯೇ ವಿನಃ ಯಾವ ಪ್ರಯೋಜನವೂ ಇಲ್ಲ. ಈ ವಾಸ್ತವ ಅಂಶವನ್ನು ಪರಸ್ಪರ ಅರ್ಥ ಮಾಡಿಕೊಂಡು ಶಾಂತಿಯಿಂದ ಬಾಳಲು ಪ್ರಯತ್ನಿಸಿದರೆ ಎಲ್ಲಾ ಸಮಸ್ಯೆಗಳಿಗೆ ತನ್ನಿಂತಾನಾಗಿಯೇ ಪರಿಹಾರ ಸಿಗಲಿದೆ ಎಂದು ಡಾ.ಶಿಖಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ವೇದಿಕೆಯ ಅಧ್ಯಕ್ಷ ದಿವಾನ್ ಕೇಶವ ಭಟ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಾಲೆಹ್ ಮುಹಮ್ಮದ್ ವಂದಿಸಿದರು. ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.
ಸೌಹಾರ್ದ ಹುಟ್ಟಿಸುವುದು ಮತ್ತು ಸದ್ಭಾವನೆ ಬೆಳೆಸುವುದು ಸುಲಭದ ಕೆಲಸವಲ್ಲ. ಹಾಗಂತ ನಾವು ಸುಮ್ಮನಿರಬಾರದು. ಭವಿಷ್ಯದ ಹಿತಕ್ಕಾಗಿ ಸಮಾಜದಲ್ಲಿ ಸೌಹಾರ್ದ ಸೃಷ್ಟಿಸಬೇಕು, ಸದ್ಭಾವನೆ ಬೆಳೆಸಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ನಾಮಕರಣ ಮಾಡುವ ಬಗ್ಗೆ ಇತ್ತೀಚೆಗೆ ಚರ್ಚೆ ನಡೆದಿತ್ತು. ಆವಾಗ ನನ್ನ ಮನಸ್ಸಿನಲ್ಲಿ ಹೊಳೆದದ್ದು, ಸೌಹಾರ್ದ ನಗರ ಅಥವಾ ಸದ್ಭಾವನಾ ನಗರ. ಹಾಗೆ ಆಗಲಿ ಎಂದು ಆಶಿಸುವೆ.
-ಫಾ.ರೂಪೇಶ್ ಮಾಡ್ತಾ ಸಂಪಾದಕರು, ರಾಕ್ಣೋ ಪತ್ರಿಕೆ
ಇತ್ತೀಚಿನ ದಿನಗಳಲ್ಲಿ ಹಬ್ಬವು ಭೀತಿಯ ವಾತಾವರಣ ಸೃಷ್ಟಿಸುತ್ತಿದೆ. ಆದರೆ ಯಾವತ್ತೂ ಹಾಗೆ ಆಗಬಾರದು. ಪ್ರತಿಯೊಂದು ಹಬ್ಬವು ಸಂಭ್ರಮವಾಗಬೇಕು. ಧರ್ಮದೊಳಗೆ ಕೋಮುವಾದ ನುಸುಳಿದರೆ ಅಪಾಯಕಾರಿ ಬೆಳವಣಿಗೆಗಳು ಘಟಿಸುತ್ತಿವೆ. ಅದಕ್ಕೆ ನಾವು ಎಂದಿಗೂ ಅವಕಾಶ ಕಲ್ಪಿಸಬಾರದು.
ಮುಹಮ್ಮದ್ ಇಸಾಕ್ ಪುತ್ತೂರು, ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷರು, ಮಂಗಳೂರು ಉತ್ತರ ವಲಯ







