ಮಂಗಳೂರು | ಪರಸ್ಪರ ಸಂತಸ ಹಂಚಿಕೊಂಡಾಗ ಸೌಹಾರ್ದ: ಜಿಲ್ಲಾಧಿಕಾರಿ ದರ್ಶನ್

ಮಂಗಳೂರು, ಡಿ.15: ಸರ್ವ ಧರ್ಮದವರು ಪರಸ್ಪರ ಸಂತಸವನ್ನು ಹಂಚಿದರೆ ಜಾತಿ, ಭೇದ ಮರೆತು ಸೌಹಾರ್ದದಿಂದ ಜೀವನ ನಡೆಸಲು ಸಾಧ್ಯ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಭಿಪ್ರಾಯಿಸಿದ್ದಾರೆ.
ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ)ಸಹಯೋಗದಲ್ಲಿ ಕದ್ರಿ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಸ್ಮಸ್ ಉತ್ಸವದ ಎರಡನೇ ದಿನ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಬಿಷಪ್ ರೆ.ಫಾ.ಡಾ.ಪೀಟರ್ ಪಾವ್ಲ್ ಸಲ್ಡಾನ, ಅರಣ್ಯಾಧಿಕಾರಿ ಆ್ಯಂಟನಿ ಮರಿಯಪ್ಪ, ಜಂಗಲ್ ಲಾಡ್ಜಸ್ ರೆಸಾರ್ಟ್‌ನ ನಿರ್ದೇಶಕ ಕ್ಲಿಫರ್ಡ್ ಲೋಬೊ, ಮಂಗಳೂರು ಧರ್ಮಪ್ರಾಂತದ ಪಿಆರ್‌ಒ ಫಾ. ಜೆ.ಬಿ.ಸಲ್ಡಾನ ಅತಿಥಿಗಳಾಗಿ ಆಗಮಿಸಿದ್ದರು.
ಕ್ರಿಸ್ಮಸ್ ಸಂದೇಶ ನೀಡಿದ ಬಿಷಪ್, ಯೇಸು ಕ್ರಿಸ್ತರ ಜನನ ಜಗತ್ತಿಗೆ ಶಾಂತಿಯ ಸಂದೇಶ ನೀಡಿದೆ. ಎಲ್ಲರಿಗೂ ಶಾಂತಿ ಸಮಾಧಾನ ಬೇಕಿದೆ. ಕಷ್ಟದಲ್ಲಿರುವವರಿಗೆ ನೆರವು, ಸಾಂತ್ವನ ನೀಡುವುದು ಒಳ್ಳೆಯ ಕೈಂಕರ್ಯ ಎಂದರು.
ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ಮಾತನಾಡಿದರು.
ಇದೇ ವೇಳೆ ಅಂತರ್‌ರಾಷ್ಟ್ರೀಯ ಕ್ರೀಡಾಪಟು ಆನಂದ್ ಸೋನ್ಸ್ ಮತ್ತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಭರತನಾಟ್ಯ ಕಲಾವಿದೆ ರೆಮೊನಾ ಇವೆಟ್ ಪಿರೇರರನ್ನು ಸನ್ಮಾನಿಸಲಾಯಿತು.
ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕ್ಯಾರಲ್ ಸಿಂಗಿಂಗ್‌ನಲ್ಲಿ ಸಂತ ಆ್ಯಗ್ನೆಸ್ ಪಿಯು ಕಾಲೇಜು ಪ್ರಥಮ, ಸಂತ ಅಲೋಶಿಯಸ್ ಕಾಲೇಜು ದ್ವಿತೀಯ, ಮದರ್ ತೆರೆಸಾ ಅಭಿಮಾನಿ ಬಳಗ ತೃತೀಯ ಸ್ಥಾನ ಪಡೆಯಿತು. ನಕ್ಷತ್ರ ರಚನೆ ಸ್ಪರ್ಧೆಯಲ್ಲಿ ಪಾದುವ ಫ್ರೆಂಡ್ಸ್ ಕ್ಲಬ್ ಪ್ರಥಮ, ಸೋನಲ್ ಕಿಶೋರ್ ಲೋಬೊ ಪೆರ್ಮನ್ನೂರು ದ್ವಿತೀಯ, ರೊಬಿ ಮಿರಾಂದ ದೇರೆಬೈಲು ತೃತೀಯ ಸ್ಥಾನ ಗಳಿಸಿದರು. ಕೇಕ್ ಸ್ಪರ್ಧೆಯಲ್ಲಿ ಶಿರ್ಲಿ ರೇಗೊ ಪ್ರಥಮ, ಪ್ರಮೀಳಾ ಮೆಂಡೋನ್ಸ ದ್ವಿತೀಯ, ಸ್ನೇಹಾ ಕುಡ್ವ ತೃತೀಯ ಬಹುಮಾನ ಗಳಿಸಿದರು.
ರೆಮೋನ ಪಿರೇರಾ ತಂಡದಿಂದ ನೃತ್ಯ ಹಾಗೂ ರೂಪಕ ಪ್ರದರ್ಶನಗೊಂಡಿತು. ಜೋಯೆಲ್ ಅತ್ತೂರ್ ಬಳಗದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಸಂಚಾಲಕರಾದ ಸ್ಟ್ಯಾನಿ ಲೋಬೊ,ಫಾ.ಸುದೀಪ್ ಪೌಲ್, ವಿಲ್ಮಾ ಮೊಂತೆರೋ, ಸಮರ್ಥ್ ಭಟ್, ಸ್ಟ್ಯಾನಿ ಬಂಟ್ವಾಳ್, ಡೋಲ್ಫಿ ಡಿಸೋಜ, ಅರುಣ್ ಡಿಸೋಜ, ರಹ್ಮಾನ್ ಕುಂಜತ್ತಬೈಲ್, ಜೇಮ್ಸ್ ಪ್ರವೀಣ್ ಸಹಕರಿಸಿದರು.
ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು. ಕೆಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ ವಂದಿಸಿದರು.







