ಮಂಗಳೂರು| ಮಹಿಳೆಗೆ ಕಿರುಕಳ ನೀಡಿದ ಆರೋಪ: ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಸಿ.ಜೆ. ಅಮಾನತು

ಮಂಗಳೂರು, ಜ.5: ಮಹಿಳೆಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಮತ್ತು ಮಾಹಿತಿ ನೀಡದೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾದ ಕಾರಣ ಉಳ್ಳಾಲ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಸಿ.ಜೆ. ಎಂಬವರನ್ನು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
2023ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾವೂರು ಠಾಣೆಗೆ ದೂರು ನೀಡಲು ಹೋದ ಮಹಿಳೆಗೆ ಸಂತೋಷ್‌ರ ಪರಿಚಯ ಆಗಿತ್ತು. ಬಳಿಕ ಸಂತೋಷ್‌ನ ನಡವಳಿಕೆ ಬಗ್ಗೆ ಅಸಮಾಧಾನಗೊಂಡ ಮಹಿಳೆ ಕಮಿಷನರ್‌ಗೆ ದೂರು ನೀಡಿದ್ದರು. ಆ ಬಗ್ಗೆ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಮಹಿಳೆಯು ದೂರನ್ನು ಹಿಂಪಡೆದಿದ್ದರು.
ಆದರೆ ನಂತರ ಸುಮ್ಮನಿರದೆ ನಿರಂತರವಾಗಿ ಕಿರುಕುಳ ನೀಡಲು ಆರಂಭಿಸಿದ ಕಾರಣ ಮಹಿಳೆ ಮತ್ತೆ ಮೇಲಾಧಿಕಾರಿಗೆ ಮಾಹಿತಿ ನೀಡಿ ಸಂತೋಷ್ ವಿರುದ್ಧ ಡಿ.17ರಂದು ಕಾವೂರು ಠಾಣೆಗೆ ದೂರು ನೀಡಿದ್ದರು. ಇದನ್ನು ತಿಳಿದ ಸಂತೋಷ್ ಡಿ.18ರಿಂದ ಮೇಲಾಧಿಕಾರಿ ಅಥವಾ ಠಾಣೆಗೆ ಯಾವುದೇ ಮಾಹಿತಿ ನೀಡದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ. ಈ ಪ್ರಕರಣದಲ್ಲಿ ವಿಚಾರಣೆಯ ಆವಶ್ಯಕತೆ ಇದ್ದ ಕಾರಣ ಇಲಾಖಾ ಶಿಸ್ತು ಕ್ರಮ/ವಿಚಾರಣೆ ಬಾಕಿ ಇರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಂತೋಷ್ ರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.







