ಮಂಗಳೂರು| ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪ: ಜೈಲು ಸಿಬ್ಬಂದಿ ಸಂತೋಷ್ ಬಂಧನ

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಜೈಲು ಸಿಬ್ಬಂದಿಯೇ ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ವರದಿಯಾಗಿದೆ.
ಜೈಲು ಸಿಬ್ಬಂದಿ ಸಂತೋಷ್ ಬಂಧಿತ ಆರೋಪಿ. ಈತ ಆ.22ರಂದು ಬೆಳಗ್ಗೆ 10:40ಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಸಂದರ್ಭದಲ್ಲಿ ಎಂದಿನಂತೆ ಮುಖ್ಯದ್ವಾರದಲ್ಲಿ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ತಪಾಸಣೆ ಮಾಡುವ ವೇಳೆ ಸಂತೋಷ್ ಅವರ ಒಳ ಉಡುಪಿನಲ್ಲಿ ಗಾಂಜಾ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಈತ ತನ್ನ ಒಳ ಉಡುಪಿನಲ್ಲಿ ಖಾಕಿ ಗಮ್‌ಟೇಪ್‌ನಲ್ಲಿ ಸುತ್ತಿ ಬಚ್ಚಿಟ್ಟಿದ್ದ ಪೊಟ್ಟಣವನ್ನು ಜೈಲು ಅಧೀಕ್ಷಕ ಶರಣ ಬಸಪ್ಪ ಮತ್ತು ಕೆಎಐಎಸ್‌ಎಫ್ ಸಹಾಯಕ ಕಮಾಂಡೆಂಟ್ ಅವರ ಸಮ್ಮುಖದಲ್ಲಿ ಅದರನ್ನು ತೆರೆದು ನೋಡಿದಾಗ ಅದರಲ್ಲಿ ಅಂದಾಜು 41 ಗ್ರಾಂನಷ್ಟು ಗಾಂಜಾದಂತೆ ಕಾಣುವ ವಸ್ತು, ಅಂದಾಜು 11 ಗ್ರಾಂನಷ್ಟು ತಂಬಾಕು, 1 ಮೊಬೈಲ್ ಚಾರ್ಜರ್ ಕೇಬಲ್, ಒಂದು ಓಟಿಜಿ, ಒಂದು ಸಣ್ಣ ನಳಿಕೆ ರೂಪದ ಲೋಹದ ವಸ್ತು, ರೋಲಿಂಗ್ ಪೇಪರ್‌ಗಳು ಪತ್ತೆಯಾಗಿವೆ.
ಈ ಬಗ್ಗೆ ವಿಚಾರಣೆಗೆ ಒಳಪಡಿಸಿದಾಗ ಬಿಜೈನಲ್ಲಿರುವ ಸೂಪರ್ ಮಾರ್ಕೆಟ್ ಬಳಿ ವ್ಯಕ್ತಿಯೊಬ್ಬ ತನಗೆ ಅದನ್ನು ನೀಡಿದ್ದು, ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪ್ರಮೋದ್ ಎಂಬಾತನಿಗೆ ನೀಡುವಂತೆ ತಿಳಿಸಿದ್ದು, ಅದರಂತೆ ನೀಡಲು ತಂದಿರುವುದಾಗಿ ಆರೋಪಿ ಜೈಲು ಸಿಬ್ಬಂದಿ ಸಂತೋಷ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಗಾಂಜಾ ಸಾಗಾಟ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಜೈಲು ಅಧೀಕ್ಷಕ ಶರಣ ಬಸಪ್ಪ ಅವರು ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







