Mangaluru | ಡಿ.20 ರಿಂದ ಕರಾವಳಿ ಉತ್ಸವ; ಆರು ಬೀಚ್‌ಗಳಲ್ಲಿ ಕಾರ್ಯಕ್ರಮ: ದ.ಕ. ಜಿಲ್ಲಾಧಿಕಾರಿ ದರ್ಶನ್

ಮಂಗಳೂರು: ಪ್ರಸಕ್ತ ವರ್ಷದ ಕರಾವಳಿ ಉತ್ಸವ ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಮತ್ತು ಸಾಹಸಮಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ಉತ್ಸವ ಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಕಡಲ ತೀರಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು 6 ಬೀಚ್‌ಗಳಲ್ಲಿ ಕರಾವಳಿ ಉತ್ಸವದ ಅಂಗವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಣಂಬೂರು, ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು, ತಣ್ಣೀರು ಬಾವಿ ಮತ್ತು ಬ್ಲೂ ಫ್ಲಾಗ್ ಬೀಚ್‌ಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಸಸಿಹಿತ್ಲು ಬೀಚ್‌ನಲ್ಲಿ ಸಾಹಸ ಕ್ರೀಡೆಗಳು, ತಣ್ಣೀರುಬಾವಿ ಬ್ಲೂ ಫ್ಲಾಗ್ ಬೀಚ್‌ನಲ್ಲಿ ವೈನ್ ಚೀಸ್ ಕೇಕ್ ಫೆಸ್ಟ್, ತಣ್ಣೀರು ಬಾವಿ ಬೀಚ್‌ನಲ್ಲಿ ಮ್ಯೂಸಿಕ್ ಫೆಸ್ಟಿವಲ್ ಮತ್ತು ಟ್ರಯತ್ಲಾನ್, ಉಳ್ಳಾಲ ಬೀಚ್‌ನಲ್ಲಿ ಫುಟ್ಬಾಲ್ ವಾಲಿಬಾಲ್ ಮತ್ತು ಮತ್ತಿತರ ಕ್ರೀಡೆಗಳು, ಪಣಂಬೂರ್ ಬೀಚ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸೋಮೇಶ್ವರ ಬೀಚ್‌ನಲ್ಲಿ ಸಂಗೀತ ಸಂಜೆ ಮತ್ತು ಯೋಗ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಆಕರ್ಷಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅದಲ್ಲದೆ ಎಲ್ಲಾ ಬೀಚ್‌ಗಳಲ್ಲಿ ಆಹಾರ ಉತ್ಸವಗಳು ನಡೆಯಲಿದ್ದು, ವೈವಿಧ್ಯಮಯ ತಿಂಡಿ ತಿನಿಸುಗಳ ಮೇಳ ನಡೆಯಲಿದೆ. ಕದ್ರಿ ಪಾರ್ಕ್‌ನಲ್ಲಿ ಕಲಾ ಪರ್ಬ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮಂಗಳೂರು ನಗರದಲ್ಲಿ ಚಲನಚಿತ್ರ ಉತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಡಿಸೆಂಬರ್ 27 ಮತ್ತು 28ರಂದು ನೆಹರು ಮೈದಾನದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕ್ರೀಡಾ ಸ್ಪರ್ಧೆ ನಡೆಯಲಿದೆ. ಪಿಳಿಕುಳ ಉದ್ಯಾನವನದಲ್ಲಿಯೂ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರನ್ನು ಆಕರ್ಷಿಸಲು ಹೆಲಿಕಾಪ್ಟರ್ ಸಂಚಾರ ಕೂಡ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್, ಉಪಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.







