ಮಂಗಳೂರು | ಕನ್ನಡ ಸಾಹಿತ್ಯದ ಚೆಲುವನ್ನು ಮರೆಯದಿರೋಣ : ಪ್ರೊ.ಧರ್ಮ

ಮಂಗಳೂರು : ಇಂಗ್ಲಿಷ್ ನ ಪ್ರಭಾವಕ್ಕೊಳಗಾಗಿ ನಮ್ಮ ಭಾಷೆಯನ್ನು, ಅದರ ಚೆಲುವನ್ನು ಮರೆತಿದ್ದೇವೆ. ಇಂತಹ ಸಂದರ್ಭದಲ್ಲಿ ಪಂಪನ ಬಗ್ಗೆ, ಕನ್ನಡದ ಬಗ್ಗೆ ತಿಳಿಯಪಡಿಸುವ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಅಭಿನಂದನೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ ಪಿ.ಎಲ್ ಧರ್ಮ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಧಾನಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ ಯೋಜನೆ ಪ್ರಾಯೋಜಿತ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಶ್ರೀಸಾಮಾನ್ಯನೇ ಎಲ್ಲ ನಾಡಿನ ನಿಜವಾದ ಆಸ್ತಿ. ಅವರ ಅರಿವನ್ನು ಬೆಳೆಸುವ ಕಾರ್ಯ ಶಿಕ್ಷಣ ಸಂಸ್ಥೆಗಳು ನಡೆಸಬೇಕಿದೆ ಎಂದರು.
ಪ್ರೊ.ಬಿ.ಎ ವಿವೇಕ ರೈ ಮಾತನಾಡಿ, ಆದಿಪುರಾಣವನ್ನು ಪಂಪ ತನ್ನ ಮೂವತ್ತೊಂಬತ್ತನೇ ವಯಸ್ಸಲ್ಲಿ ಬರೆದ. ಅದು ಬದುಕಿನ ದರ್ಶನ, ಒಳನೋಟವುಳ್ಳ ಕಾವ್ಯ. ಪ್ರಭುತ್ವದ ಹೆಸರಿನ ಮೋಹವನ್ನು ತೊರೆಯುವಂತೆ ಮಾಡುವ, ಗರ್ವರಸ ಸೋರುವಂತೆ ಮಾಡುವ ಅಧಿಕಾರ ತ್ಯಾಗದ ಭಾವನೆಯನ್ನು ಬೆಳೆಸುವ ಕಾವ್ಯ. ಭರತ ಬಾಹುಬಲಿಯ ಪ್ರಸಂಗವನ್ನು ನೆನಪು ಮಾಡಿಕೊಂಡ ಅವರು ನಾವು ಅಧಿಕಾರ ಪ್ರೀತಿಯ ಭರತನನ್ನು ಮರೆತಿದ್ದೇವೆ ಆದರೆ ಬಾಹುಬಲಿಯ ಮೂರ್ತಿಯನ್ನು ಅಲ್ಲಲ್ಲಿ ಕಾಣುತ್ತೇವೆ. ಅವನು ವೈರಾಗ್ಯಮೂರ್ತಿ, ತ್ಯಾಗಮೂರ್ತಿ. ಅದಿಪುರಾಣ ಮನೋಧರ್ಮದ ಪಕ್ವತೆಯನ್ನು ಸಾರುವ ಕೃತಿ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿ ಕುಲಸಚಿವ ಪ್ರೊ.ಗಣೇಶ್ ಸಂಜೀವ್, ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿಗೌಡ ಉಪಸ್ಥಿತರಿದ್ದರು. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ ಸ್ವಾಗತಿಸಿದರು. ಡಾ.ಧನಂಜಯ ಕುಂಬ್ಳೆ ವಂದಿಸಿದರು. ಡಾ.ಯಶುಕುಮಾರ್ ನಿರೂಪಿಸಿದರು.







