ಮಂಗಳೂರು| ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ: ಬಿ.ಕೆ ಇಮ್ತಿಯಾಝ್

ಮಂಗಳೂರು, ಜ.15: ಜನರಿಗೆ ಮನೆ, ಕಾರು, ಚಿನ್ನದ ಆಮಿಷ ಒಡ್ಡಿ ಜನರಿಂದ ಸಾವಿರಾರು ಮಂದಿಗೆ ಪಂಗನಾಮ ಹಾಕುತ್ತಿರುವ ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಒಂದು ಒತ್ತಾಯಿಸಿದ್ದಾರೆ.
ಲಕ್ಕಿ ಸ್ಕೀಮ್ ಕಂಪೆನಿಯಿಂದ ವಂಚನೆಗೆ ಒಳಗಾದ ಸಂತ್ರಸ್ತರ ಪ್ರತಿಭಟನೆಯನ್ನು ನಗರದ ಕ್ಲಾಕ್ ಟವರ್ ಬಳಿ ಉದ್ಘಾಟಿಸಿ ಮಾತನಾಡಿದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ ಮಂಗಳೂರಲ್ಲಿ ಸುಮಾರು 100ಕ್ಕೂ ಹೆಚ್ಚು ಬ್ಲೇಡ್ ಕಂಪೆನಿಗಳು ಸಾವಿರಾರು ಕೋಟಿ ಜನರಿಂದ ಸಂಗ್ರಹಿಸಿದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಇವರ ವಂಚನಾ ವಿಸ್ತರಣೆ ಆಗಿದೆ. ಜಿಲ್ಲೆಯಲಿರುವ ಎಲ್ಲಾ ಲಕ್ಕಿ ಸ್ಕೀಮ್ ಗಳು ಕಾನೂನು ಬಾಹಿರವಾಗಿ ಕಾರ್ಯಚರಿಸುತ್ತಿದೆ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬಡವರ ಪ್ರಾಮಾಣಿಕತೆ ಯನ್ನು ಹೈಜಾಕ್ ಮಾಡಲಾಗಿದೆ, ಮಕ್ಕಳ ವಿದ್ಯಾಬ್ಯಾಸ, ಹೆಣ್ಣು ಮಕ್ಕಳ ಮದುವೆಗೆ ಸಹಾಯವಾಗಲೆಂದು ಹೂಡಿಕೆ ಮಾಡಿದ್ದ ಬಡಪಾಯಿಗಳಿಗೆ ಅನ್ಯಾಯ ಆಗಿದೆ ಎಂದರು.
ಪೊಲೀಸರು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಂಚನೆ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಸಿಐಟಿಯು ಮುಖಾಂಡರಾದ ಯೋಗೀಶ್ ಜಪ್ಪಿನನಮೊಗರು, ಡಿವೈಎಫ್‌ಐ ಮುಖಂಡ ತಯ್ಯುಬ್ ಬೆಂಗ್ರೆ ಮಾತನಾಡಿದರು. ಸಂತ್ರಸ್ತರ ವೇದಿಕೆಯ ಸಹ ಸಂಚಾಲಕ ಸಮದ್ ಕಾಟಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು
ಪ್ರತಿಭಟನೆಯ ನೇತೃತ್ವವನ್ನು ಸಂತ್ರಸ್ತರ ವೇದಿಕೆಯ ಪ್ರಮುಖ ಪರ್ವೀಝ್ ಬಂದರ್, ಖಲೀಲ್ ಬೆಂಗ್ರೆ, ನಟೇಶ್, ರಾಮ್ ಸುರತ್ಕಲ್, ಮನ್ಸೂರ್ ಅಡ್ಡೂರು, ಫಾರೂಕ್ ಕುಕ್ಕಾಜೆ, ಅಬ್ದುಲ್ ಅಝೀಝ್ ಕೃಷ್ಣಾಪುರ, ಖಾಸಿಂ ಕಾಟಿಪಳ್ಳ, ಸನಾ ಮಣಿಪಾಲ, ಜಯಲಕ್ಷ್ಮೀ ಉಳ್ಳಾಲ, ಖೈರುನ್ನಿಸಾ ಉಚ್ಚಿಲ, ಸುಜಾತ ಮಧ್ಯಪಾದವು, ಸುಹಾನಾ ಬೆಂಗಳೂರು, ಫೈಝಲ್ ಚಿಕ್ಕಮಗಳೂರು, ಮುಹಮ್ಮದ್ ಪಾಷ ಶಿವಮೊಗ್ಗ ವಹಿಸಿದ್ದರು.







