ಮಂಗಳೂರು| ಲಾಕರ್ ಕದ್ದೊಯ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಳಿಗೆಯಲ್ಲಿ ಕೆಲಸಕ್ಕಿದ್ದ ಯಶವಂತ ನಾಯ್ಕ್, ಶ್ರವಣ್‌ರಿಂದ ಕೃತ್ಯ

ಮಂಗಳೂರು, ಜು.8: ನಗರದ ಕೊಡಿಯಾಲ್‌ಬೈಲಿನ ಸಾಯಿ ಶಾರದಾ ಕಟ್ಟಡದ ನ್ಯೂಟ್ರೀಶಿಯನ್ ಪ್ರಾಡಕ್ಟ್ ಮಳಿಗೆಯಿಂದ 3.30 ಲಕ್ಷ ರೂ. ನಗದು ಇದ್ದ ಲಾಕರ್ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಚಿಕ್ಕಮಗಳೂರು ಕಡೂರಿನ ಹಾಗೂ ಇದೀಗ ಮಲ್ಲಿಕಟ್ಟೆ ನಿವಾಸಿ ಯಶವಂತ ನಾಯ್ಕ್ (19), ಶಕ್ತಿನಗರ ಕಾರ್ಮಿಕ ಕಾಲನಿ ನಿವಾಸಿ ಶ್ರವಣ್ (19) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
*ಘಟನೆಯ ವಿವರ: ಮಳಿಗೆಯ ಮುಖ್ಯಸ್ಥರಾದ ಸತೀಶ್ ಜೂ.29ರಂದು ರಾತ್ರಿ ವ್ಯವಹಾರದ ಹಣ 3,33,030 ರೂ.ವನ್ನು ಲಾಕರ್‌ನಲ್ಲಿ ಇಟ್ಟು ಬಾಗಿಲು ಮುಚ್ಚಿ ಹೋಗಿದ್ದರು. ಜೂ.30ರಂದು ಬೆಳಗ್ಗೆ ಬಂದು ನೋಡಿದಾಗ ಶಟರ್‌ನ ಬೀಗ ತೆರೆದ ಸ್ಥಿತಿಯಲ್ಲಿ ಇತ್ತು. ಅನುಮಾನ ಬಂದು ಒಳಗೆ ಹೋಗಿ ಪರಿಶೀಲಿಸಿದಾಗ ಲಾಕರ್ ಕಳವಾಗಿರುವುದು ಬೆಳಕಿಗೆ ಬಂತು ಎನ್ನಲಾಗಿದೆ.
ಕಳೆದು ಹೋಗಿದ್ದ ಕೀ : ಕಳವಿಗೆ ಕೆಲವು ದಿನ ಮೊದಲು ಮಳಿಗೆಯ ಶಟರ್‌ನ ಬೀಗದ ಕೀ ಕಳೆದು ಹೋಗಿತ್ತು. ಕಳ್ಳರು ಆ ಕೀಯನ್ನು ಉಪಯೋಗಿಸಿ ಶಟರ್ ಬೀಗ ತೆಗೆದು ಒಳ ಪ್ರವೇಶಿಸಿ ಹಣ ಸಹಿತ ಲಾಕರ್ ಕಳವು ಮಾಡಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.
ಆರೋಪಿಗಳಿಂದ ಕಳವು ಮಾಡಿದ ಲಾಕರ್ ಸಹಿತ ನಗದು, ಕೃತ್ಯಕ್ಕೆ ಉಪಯೋಗಿಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಿಂದೆ ಮಳಿಗೆಯಲ್ಲಿ ಕೆಲಸಕ್ಕಿದ್ದವರ ಕೃತ್ಯ: ಹಿಂದೆ ನ್ಯೂಟ್ರೀಶಿಯನ್ ಪ್ರಾಡಕ್ಟ್ ಮಳಿಗೆಯಲ್ಲಿ ಆರೋಪಿಗಳಾದ ಯಶವಂತ್ ಹಗಲು ಹೊತ್ತು ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರೆ, ಶ್ರವಣ್ ಕ್ಲರ್ಕ್ ಆಗಿದ್ದನು. ಶ್ರವಣ್ ಕೆಲ ಸಮಯದ ಹಿಂದೆ ಕೆಲಸವನ್ನು ಬಿಟ್ಟಿದ್ದ. ಇದಾದ ಬಳಿಕ ಕಳವಿಗೆ ಸ್ಕೆಚ್ ರೂಪಿಸಿದ್ದ. ಈ ಇಬ್ಬರು ಆರೋಪಿಗಳು ಒಂದು ತಿಂಗಳ ಹಿಂದೆ ಮಳಿಗೆಯ ಶಟರ್ ಕೀ ಕಳವುಗೈದಿದ್ದರು.
ಕದ್ರಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಪಿಎಸ್‌ಐ ಮನೋಹರ್ ಪ್ರಸಾದ್, ಎಎಸ್‌ಐ ಚಂದ್ರಶೇಖರ್, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಎಚ್.ಸಿ. ಸಂತೋಷ್,ಡಿ.ಕೆ. ಸುರೇಶ್, ಪಿಸಿಗಳಾದ ಮಣಿಕಂಠ, ಸುನೀಲ್, ಪವಿತ್ರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







