ಮಂಗಳೂರು | ಕಾಂಗ್ರೆಸ್ ಹುದ್ದೆಗಳಿಗೆ ಮುಸ್ಲಿಂ ಮುಖಂಡರ ಸಾಮೂಹಿಕ ರಾಜೀನಾಮೆ : ಶಾದಿಮಹಲ್ ಸಭೆಯಲ್ಲಿ ನಡೆದಿದ್ದೇನು ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಭೀಕರ ಹತ್ಯೆಗಳ ಬೆನ್ನಿಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪ್ರಕಟಿಸಲು ದ.ಕ.ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತ ಮುಖಂಡರು ಗುರುವಾರ ನಗರದ ಬೋಳಾರದಲ್ಲಿರುವ ಶಾದಿಮಹಲ್‌ನ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಕೋಲಾಹಲ ಉಂಟಾಯಿತು.
ಕೊಳತ್ತಮಜಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹ್ಮಾನ್ ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ನಡೆಯುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಇಂದು (ಮೇ 29) ಸಭೆ ಕರೆದು ರಾಜೀನಾಮೆ ಘೋಷಣೆ ಮಾಡುವುದಾಗಿಯೂ ನಿಗದಿಯಾಗಿತ್ತು.
ಅದರಂತೆ ಗುರುವಾರ ಮಧ್ಯಾಹ್ನ ಬೋಳಾರದ ಶಾದಿ ಮಹಲ್ ನಲ್ಲಿ ಸಭೆ ಸೇರಿದಾಗ ಸಾವಿರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆರೆದಿದ್ದರು.
ಮಾತು ಆರಂಭಿಸಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಜಿಲ್ಲೆಯಲ್ಲಿ ಗುಂಪಿನಿಂದ ಥಳಿತಕ್ಕೊಳಗಾಗಿ ಹತ್ಯೆಯಾದ ಅಶ್ರಫ್ ಪ್ರಕರಣ ಬೆಳಕಿಗೆ ಬಂದಾಗಲೇ ಸಮುದಾಯಕ್ಕೆ ನೋವಾಗಿತ್ತು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ನಾವು ಆಗ್ರಹಿಸಿದ್ದೆವು. ಆದರೆ ಅಬ್ದುಲ್ ರಹ್ಮಾನ್ ಹತ್ಯೆಯಾದಾಗ ನಮ್ಮ ಸಹನೆಯ ಕಟ್ಟೆ ಒಡೆಯಿತು. ನಮ್ಮದೇ ನೇತೃತ್ವದ ಸರಕಾರ ಇದ್ದರೂ ಹೀಗಾಗುತ್ತಿದೆ ಎಂದು ಬೇಸರಪಟ್ಟುಕೊಂಡೆವು. ಅಂತಿಮವಾಗಿ ಸಮುದಾಯದ ಪರವಾಗಿ ನಿಂತು ರಾಜೀನಾಮೆ ನೀಡಬೇಕು ಎಂದು ಮುಖಂಡರು ತೀರ್ಮಾನಿಸಿದ್ದೆವು. ಆದರೆ ಈ ಕುರಿತು ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಕರೆ ಮಾಡಿ, ಆತುರದ ನಿರ್ಧಾರ ಮಾಡಬೇಡಿ. ಒಂದು ವಾರಗಳ ಸಮಯ ನೀಡಿ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಹಾಗಾಗಿ ರಾಜೀನಾಮೆ ನೀಡುವುದನ್ನು ಒಂದು ವಾರಗಳ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.
ಒಂದು ವಾರದ ಕಾಲ ರಾಜೀನಾಮೆ ಮುಂದೂಡೂವುದಾಗಿ ಶಾಹುಲ್ ಹಮೀದ್ ಅವರು ಹೇಳುತ್ತಿದ್ದಂತೆ ಸೇರಿದ್ದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾವು ರಾಜೀನಾಮೆ ನೀಡುವ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಂದ ಸಭಾಂಗಣದಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ಕೇಳಿಸದಷ್ಟು ಗದ್ದಲವುಂಟಾಯಿತು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಖಂಡರು ಹರಸಾಹಸ ಪಟ್ಟರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾರ್ಪೊರೇಟರ್ ಅಬ್ದುಲ್ ರವೂಫ್, ʼಗದ್ದಲ ಎಬ್ಬಿಸುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲ ಬೇರೆ ಯಾರೋ ಇದ್ದಾರೆʼ ಎಂದಿದ್ದು ಕಾರ್ಯಕರ್ತರನ್ನು ಮತ್ತಷ್ಟು ಕೆರಳಿಸಿತು. ಎದ್ದು ನಿಂತ ಕಾರ್ಯಕರ್ತರು ತಮ್ಮ ಗುರುತಿನ ಚೀಟಿ ತೋರಿಸಿ ತಾವು ಕಾಂಗ್ರೆಸ್ ಕಾರ್ಯಕರ್ತರೇ ಇಲ್ಲಿ ಸೇರಿದ್ದೇವೆ. ನಮಗೆ ನ್ಯಾಯ ಬೇಕು. ರಾಜೀನಾಮೆ ಕೊಡುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ಒಂದು ಹಂತದಲ್ಲಿ ವೇದಿಕೆಗೆ ನುಗ್ಗಿದ ಕಾರ್ಯಕರ್ತರು ನಮಗೆ ನ್ಯಾಯ ಬೇಕೇ ಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.
ಕೆ.ಕೆ.ಶಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್, ಅಬ್ದುಲ್ ರವೂಫ್ ಹಾಗು ಸುಹೇಲ್ ಕಂದಕ್ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಕಾರ್ಯಕರ್ತರ ಒತ್ತಡಕ್ಕೆ ಮುಖಂಡರು ಮಣಿದರು.
ಸುಹೇಲ್ ಕಂದಕ್ ಮುಂದೆ ಬಂದು ಪಕ್ಷದ ಹುದ್ದೆಗೆ ರಾಜೀನಾಮೆ ಘೋಷಿಸಿದರು. ಆ ಬಳಿಕ ಕೆ.ಕೆ.ಶಾಹುಲ್ ಹಮೀದ್, ಎಂ.ಎಸ್.ಮುಹಮ್ಮದ್ ಸೇರಿದಂತೆ ಒಬ್ಬೊಬ್ಬರಾಗಿ ರಾಜೀನಾಮೆ ಘೋಷಿಸಿದರು. ಅದನ್ನು ಮಾಧ್ಯಮಗಳ ಮುಂದೆಯೂ ಹೇಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದರಿಂದ ಈ ಮುಖಂಡರು ಮಾಧ್ಯಮಗಳಿಗೂ ತಮ್ಮ ರಾಜೀನಾಮೆಯ ವಿಷಯ ಪ್ರಕಟಿಸಿದರು.