ಮಂಗಳೂರು | ʼಮೀಫ್ ಸುಲ್ತಾನ್ ಕಪ್-2025ʼ ಇಂಟರ್-ಸ್ಕೂಲ್ ಫುಟ್ಬಾಲ್ ಪಂದ್ಯಾಟ

ಮಂಗಳೂರು, ಡಿ.6: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)ದ ಬೆಳ್ಳಿಹಬ್ಬದ ಪ್ರಯುಕ್ತ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಮೀಫ್-ಸುಲ್ತಾನ್ ಕಪ್-2025 ಇಂಟರ್-ಸ್ಕೂಲ್ ಫುಟ್ಬಾಲ್ ಪಂದ್ಯಾಟವು ಶನಿವಾರ ನಗರದ ನೆಹರೂ ಮೈದಾನದಲ್ಲಿ ನಡೆಯಿತು.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪಂದ್ಯಾಟ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಗಳು ಅತ್ಯಂತ ಅಗತ್ಯವಾಗಿದೆ. ಶಿಸ್ತು, ತಂಡ ಭಾವನೆ ಮತ್ತು ಸ್ಪರ್ಧಾತ್ಮಕತೆ ಇತ್ಯಾದಿ ಮೌಲ್ಯಗಳನ್ನು ಕ್ರೀಡಾ ವೇದಿಕೆಗಳು ಪರಿಣಾಮಕಾರಿಯಾಗಿ ಬೆಳೆಸುತ್ತವೆ ಎಂದು ಹೇಳಿದರು.
ಕುನಿಲ್ ಶಾಲೆಯ ಉಪಾಧ್ಯಕ್ಷ ಪಿ.ಎಸ್.ಮೊಯ್ದಿನ್, ಅಝಾದ್ ಗ್ರೂಪ್ಸ್ ಮಂಗಳೂರು ಮುಖ್ಯಸ್ಥ ಮನ್ಸೂರ್ ಅಹ್ಮದ್ ಅಝಾದ್, ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ವ್ಯವಸ್ಥಾಪಕ ನಿರ್ದೇಶಕ ರವೂಫ್ ಸುಲ್ತಾನ್ ವಿಜೇತರಿಗೆ ಟ್ರೋಫಿ ವಿತರಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ಶಾಲೆಗಳ 34 ತಂಡಗಳ ಸುಮಾರು 500ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕುನಿಲ್ ಇಲ್ಮ್ ಅಕಾಡಮಿ ನಾಟೇಕಲ್ (ಪ್ರಥಮ) ಮತ್ತು ಎ.ಆರ್.ಕೆ. ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಂಗ್ರೆ (ದ್ವಿತೀಯ) ಹಾಗೂ ಬೆಂಗ್ರೆ ಎಆರ್‌ಕೆ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ನಿಹಾನ್ (ಅತ್ಯುತ್ತಮ ಡಿಫೆಂಡರ್), ನಾಟೆಕಲ್‌ನ ಕುನಿಲ್ ಇಲ್ಮ್ ಅಕಾಡಮಿಯ ಸುಹೈಲ್ (ಅತ್ಯುತ್ತಮ ಗೋಲ್‌ಕೀಪರ್) ಮತ್ತು ಇಜಾಝ್ (ಅತ್ಯುತ್ತಮ ಸ್ಟ್ರೈಕರ್) ಆಗಿ ಮಿಂಚಿದರು.
ಟೂರ್ನಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಬೆಳ್ತಂಗಡಿಯ ಮನ್‌ಶರ್ ಪ್ಯಾರಾ ಮೆಡಿಕಲ್ ಕಾಲೇಜ್ ವತಿಯಿಂದ ಉಚಿತ ಪ್ರಥಮ ಚಿಕಿತ್ಸೆ ಮತ್ತು ಮೀಫ್ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಉಚಿತ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಯಿತು.
ಮೀಫ್ ಕೇಂದ್ರ ಘಟಕದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಪರ್ವೇಝ್ ಅಲಿ, ಸಂಚಾಲಕ ಅದಿಲ್ ಸೂಫಿ, ಸಮಿತಿ ಸದಸ್ಯರಾದ ಬಿ.ಎ.ನಝೀರ್, ಇಕ್ಬಾಲ್ ಕೃಷ್ಣಾಪುರ, ಅಡ್ವಕೇಟ್ ಒಮರ್ ಫಾರೂಕ್, ಅನ್ವರ್ ಗೂಡಿನಬಳಿ, ರಹ್ಮತುಲ್ಲಾ ಬುರೂಜ್, ಫಾರೂಕ್ ಏರ್‌ಲೈನ್ಸ್, ರಝಾಕ್ ಹಜಾಜ್ ಪಾಲ್ಗೊಂಡಿದ್ದರು.
ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಅಝೀಝ್ ಅಂಬರ್‌ವ್ಯಾಲಿ ವಂದಿಸಿದರು.







