ಮಂಗಳೂರು| ಕುಡುಪು ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ: ಆರೋಪ

ಸಾಂದರ್ಭಿಕ ಚಿತ್ರ
ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಷಷ್ಟಿ ಮಹೋತ್ಸವದ ಜಾತ್ರೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ವ್ಯಾಪಾರಿಗಳು ಡಿವೈಎಫ್ಐ ನೇತೃತ್ವದಲ್ಲಿ ದ.ಕ.ಜಿಲ್ಲಾಧಿಕಾರಿಗೆ ದೂರು ನೀಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಡಿ.14ರಿಂದ 19ವರೆಗೆ ಇಲ್ಲಿ ಜಾತ್ರೆ ನಡೆಯಲಿದೆ. ಈ ಜಾತ್ರೆ ಮಹೋತ್ಸವದಲ್ಲಿ ವ್ಯಾಪಾರ ಮಾಡಲು ಮುಸ್ಲಿಮರು ಪೂರಕ ಪ್ರಕ್ರಿಯೆ ನಡೆಸಲು ಮುಂದಾದಾಗ "ನಿಮಗೆ ರಕ್ಷಣೆ ನೀಡಲು ನಮಗೆ ಸಾಧ್ಯವಿಲ್ಲ" ಎಂದು ಸಂಬಂಧಪಟ್ಟವರು ಹೇಳಿ ವ್ಯಾಪಾರ ಮಾಡದಂತೆ ಪರೋಕ್ಷ ತಡೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಧಾರ್ಮಿಕ ತಾರತಮ್ಯ ನಡೆಯುತ್ತಿರುವುದು ಖಂಡನೀಯ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಮತ್ತೆ ಜಿಲ್ಲಾಡಳಿತ ವಿಫಲವಾಗಿದೆ ಎಂದು ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ. ಬಡ ಸಂತೆ ವ್ಯಾಪಾರಿಗಳ ಜೊತೆ ಸರಕಾರದ ನಿಂತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





