ಮಂಗಳೂರು | ರಾಷ್ಟ್ರೀಯ ನವಜಾತ ಶಿಶು ಸಪ್ತಾಹ, ನ್ಯೂಮೋನಿಯಾ ಜಾಗೃತ ಅಭಿಯಾನ

ಮಂಗಳೂರು,ನ.28: ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ - ಹಾಗೂ ನ್ಯೂಮೋನಿಯಾ ಜಾಗೃತ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಕ್ಕಳ ತಜ್ಞೆ ಡಾ.ಸುಜೇತ ರಾವ್, ನವಜಾತ ಶಿಶು ಆರೈಕೆಯೊಂದಿಗೆ ನ್ಯುಮೋನಿಯ ಖಾುಲೆಯ ಬಗ್ಗೆ ಜಾಗೃತಿ ಮೂಡಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. ನವಜಾತ ಶಿಶುಗಳಲ್ಲಿ ಕಂಡುಬರುತ್ತಿರುವ ಪ್ರಮುಖ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆಯನ್ನು ನೀಡಬೇಕಾಗಿದೆ. ಪ್ರತಿಯೊಬ್ಬ ತಾಯಂದಿರು ಮಗುವಿನ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಶಿಶು ಮರಣವನ್ನು ತಡೆ ಹಿಡಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೆನ್ಲಾಕ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಸುಧಾಕರ್ ಮಾತನಾಡಿ, ನವಜಾತ ಶಿಶು ತುಂಬಾ ಸೂಕ್ಷ್ಮವಾಗಿದ್ದು, ಆರೈಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವು ಸಂದರ್ಭ ನವಜಾತ ಶಿಶು ಆರೈಕೆಯಲ್ಲಿ ಅವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿ ಶಿಶುವಿನ ಅನಾರೋಗ್ಯಕ್ಕೆ ಹೆತ್ತವರು ಕಾರಣರಾಗುತ್ತಿದ್ದಾರೆ. ಆದ್ದರಿಂದ ಮೂಢನಂಬಿಕೆಯನ್ನು ಹೋಗಲಾಡಿಸಿ, ಗರ್ಭಿಣಿ ಆರೈಕೆಯಿಂದಲೇ ನವಜಾತ ಶಿಶುವಿನ ಆರೈಕೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ತಜ್ಞ ಡಾ. ಕೃಷ್ಣ, ಪೌಷ್ಟಿಕ ಪುನಶ್ಚೇತನ ಕೇಂದ್ರದ ವೈದ್ಯಾಧಿಕಾರಿ ಡಾ.ದೀಕ್ಷಾ, ಪಿಐಸಿಯು ವೈದ್ಯಾಧಿಕಾರಿ ಡಾ.ಜನಾರ್ದನ ಶೈಣೈ, ಎನ್ಐಸಿಯು ವೈದ್ಯಾಧಿಕಾರಿ ಡಾ. ಸಿಂಚನಾ, ಉಪ ಪ್ರಾಂಶುಪಾಲೆ ಗೀತಾ ಭಾಗವಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಲಿಯಮ್ಮ ಕಾರ್ಯಕ್ರಮ ನಿರೂಪಿಸಿದರು.







