ಮಂಗಳೂರು | ಎನ್‌ಎಂಪಿಎ ಪಿಂಚಣಿದಾರರ ಭವಿಷ್ಯ ಸುರಕ್ಷಿತ : ಡಾ.ಅಕ್ಕರಾಜು

ಮಂಗಳೂರು : ತನ್ನ ಸ್ಥಾಪನೆಯ 50 ವರ್ಷ ಪೂರೈಸಿರುವ ನವಮಂಗಳೂರು ಪ್ರಾಧಿಕಾರವು ಈ ವರ್ಷ 46.01 ದಶಲಕ್ಷ ಮೆಟ್ರಿಕ್ ಟನ್ ಸಾಮಗ್ರಿಗಳನ್ನು ನಿರ್ವಹಿಸುವುದರ ಮೂಲಕ ದಾಖಲೆ ನಿರ್ಮಿಸಿದ್ದು, 2019ರಲ್ಲಿ ತೆರಿಗೆ ಕಳೆದು 137 ಕೋಟಿ ರೂ. ಲಾಭಗಳಿಸಿದ್ದರೆ, ಈ ವರ್ಷ ತೆರಿಗೆ ಕಳೆದು 390 ಕೋಟಿ ರೂ. ಲಾಭಗಳಿಸಿದೆ. ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬಂದರು ಪ್ರಾಧಿಕಾರದ ಎಲ್ಲ ಪಿಂಚಣಿದಾರರ ಭವಿಷ್ಯವೂ ಇಲ್ಲಿ ಸುರಕ್ಷಿತವಾಗಿದೆ. ಪೆನ್ಷನ್ ಫಂಡಿನ ಹಣ ಸಂಪೂರ್ಣ ತುಂಬಿಸಲಾಗಿದ್ದು, ಪಿಂಚಣಿದಾರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ಅತ್ಯುತ್ತಮ ವೈದ್ಯಕೀಯ ಸವಲತ್ತನ್ನು ನೀಡಲಾಗುತ್ತಿದೆ ಎಂದು ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟ ರಮಣ ಅಕ್ಕರಾಜು ಹೇಳಿದರು.
ಪಣಂಬೂರಿನಲ್ಲಿ ನವಮಂಗಳೂರು ಬಂದರು ಪಿಂಚಣಿದಾರರ ಕಲ್ಯಾಣ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತಾಡಿದರು.
ಸಂಘದ ನೂತನ ನಾಮ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಬಂದರು ಪ್ರಾಧಿಕಾರದ ಉಪಾಧ್ಯಕ್ಷೆ ಎಸ್.ಶಾಂತಿ ಅವರು, ಅಧ್ಯಕ್ಷರ ಮಾರ್ಗದರ್ಶನದಲ್ಲಿ ಪಿಂಚಣಿದಾರರ ಹಿತರಕ್ಷಣೆಯ ಕಾರ್ಯ ಸಮರ್ಪಕವಾಗಿ ಸಾಗುತ್ತಿದ್ದು, ಇದು ಹೀಗೆಯೇ ಮುಂದುವರಿಯಲಿದೆ ಎಂದು ಭರವಸೆ ನೀಡಿದರು
ಸಂಘದ ಅಧ್ಯಕ್ಷ ಬಿ ಸದಾಶಿವ ಶೆಟ್ಟಿಗಾರ್‌ರವರ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ ಬಂದರು ಪ್ರಾಧಿಕಾರದ ಕಾರ್ಯದರ್ಶಿ ಜಿಜೊ ಥಾಮಸ್, ಮುಖ್ಯ ಆರ್ಥಿಕ ಸಲಹೆಗಾರ ವೀರ ರಾಘವನ್, ಚೀಫ್ ಇಂಜಿನಿಯರ್ ಸಿವಿಲ್ ಎಸ್. ಬಿ.ಲಗ್ವಾಂಕರ್, ಚೀಫ್ ಇಂಜಿನಿಯರ್ ಮೆಕ್ಯಾನಿಕಲ್ ದೀಪಕ್ ರತ್, ಮುಖ್ಯ ವೈದ್ಯಾಧಿಕಾರಿ ಡಾ.ಸುರೇಖ ಎನ್.ಹೊಸ್ಕೇರಿ, ಸೀನಿಯರ್ ಡೆಪ್ಯುಟಿ ಸೆಕ್ರೆಟರಿ ಕೃಷ್ಣ ಬಾಪಿ ರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿ ಹೆಚ್. ಆರ್. ದಿನೇಶ್ ಆಚಾರ್ ಸ್ವಾಗತಿಸಿದರು. ಸದಸ್ಯೆ ಶ್ರೀದೇವಿ ರಾವ್ ಧನ್ಯವಾದ ಸಲ್ಲಿಸಿದರು. ಕಲಾವತಿ ಮತ್ತು ಶ್ರೀದೇವಿ ರಾವ್ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನು ಸಂಘದ ಉಪಾಧ್ಯಕ್ಷ ಬಿ.ಎ.ಮುಹಮ್ಮದ್ ಅಲಿ ಕಮ್ಮರಡಿ ನೆರವೇರಿಸಿದರು.







