ಮಂಗಳೂರು | ಸಾಹಿತ್ಯ ಓದಲು ಮೊಬೈಲ್ ಬಿಡಬೇಕಿಲ್ಲ : ಪ್ರಶಾಂತ್ ಮಾಡ್ತ

ಮಂಗಳೂರು, ಡಿ.12: ವಿಶಿಷ್ಟ ಕಲ್ಪನಾ ವಿಲಾಸಕ್ಕೆ, ಹೊಸತನಕ್ಕೆ ಹಾತೊರೆಯಿರಿ. ಹೊಸ ಚಿಂತನೆಗಳಿಗೆ ಮನಸ್ಸು ತೆರೆದಿಡಿ. ಸಾಹಿತ್ಯ ಓದಲು ಮೊಬೈಲ್ ಬಿಡಬೇಕಿಲ್ಲ. ಆದರೆ ಮೊಬೈಲ್ ಬಳಕೆಯ ಮಿತಿ ಗೊತ್ತಿರಲಿ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ವಂ. ಪ್ರಶಾಂತ್ ಮಾಡ್ತ ಹೇಳಿದರು.
ಮಾಂಡ್ ಸೊಭಾಣ್ ತನ್ನ ಸಾಹಿತ್ಯದ ಅಂಗವಾಗಿ ಮಿಟಾಕಣ್ ಅಕಾಡಮಿ ಮೂಲಕ ಇತ್ತೀಚೆಗೆ ಶಕ್ತಿನಗರದ ಕಲಾಂಗಣದಲ್ಲಿ ಮಕ್ಕಳಿಗಾಗಿ ಆಯೋಜಿಸಿದ ಪರಾಗ್ ಸಾಹಿತ್ಯ ಸಮ್ಮೇಳನವನ್ನು ಪೆನ್ನಿನ ಪ್ರತಿಕೃತಿಗೆ ಶಾಯಿ ತುಂಬಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆಶಯ ಭಾಷಣಗೈದ ಮಕ್ಕಳ ಪ್ರತಿನಿಧಿ ಸಂಜನಾ ರಿವಾ ಮಥಾಯಸ್ ಶಾಲಾ ಓದು ಮತ್ತು ಸಾಹಿತ್ಯದ ಓದಿನ ವ್ಯತ್ಯಾಸಗಳನ್ನು ತಿಳಿಸಿದರಲ್ಲದೆ ಉತ್ತಮ ಅಂಕಗಳು ಮಾತ್ರವಲ್ಲ. ಉತ್ತಮ ಸಾಹಿತ್ಯ ಕೂಡಾ ಜೀವನಕ್ಕೆ ಅಗತ್ಯವಿದೆ. ಸಾಹಿತ್ಯದ ಒಲವು ಮನೆಯಲ್ಲೇ ಆರಂಭವಾಗಬೇಕು ಎಂದರು.
ವಿತೊರಿ ಕಾರ್ಕಳ ಸಂಪಾದಿಸಿದ 26 ಲೇಖಕರು ಅನುವಾದಿಸಿದ 36 ಕತೆಗಳ ಅನುವಾದ ಪುಸ್ತಕ ಝಮ್ಹೊಂವಾ-ಪೊಳಿ ಪುಸ್ತಕವನ್ನು ಜೇನುಗೂಡಿನಿಂದ ಹಾಗೂ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನದಲ್ಲಿ ಪ್ರಿಥುಮಾ ಮೊಂತೇರೊ ದಾಖಲಿಸಿದ ಕೊಂಕಣಿ ಕ್ರಿಶ್ಚಿಯನ್ಸ್ ಫೊಕ್ ಕಲ್ಚರ್ ಸಂಶೋಧನಾ ಕೃತಿಯನ್ನು ದೂರದರ್ಶಕದ ಪ್ರತಿಕೃತಿಯಿಂದ ಹೊರ ತೆಗೆದು ಲೋಕಾರ್ಪಣೆಗೊಳಿಸಲಾಯಿತು.
ಕೇರನ್ ಮಾಡ್ತಾ ಸಂಪಾದಿಸಿದ ಸಿಲ್ವೆಸ್ಟರ್ ಡಿಸೋಜ ಮೈಸೂರು ದಶಕಗಳ ಹಿಂದೆ ರಚಿಸಿದ ವ್ಹಡ್ಲಿಮಾಂಯ್ಚ್ಯೊ ಕಾಣಿಯೊ ಮಕ್ಕಳ ಜನಪದ ಕತಾ ಸಂಗ್ರಹಗಳ ಇ-ಬುಕ್ ಬಿಡುಗಡೆಗೊಳಿಸಲಾಯಿತು.
ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಕ್ಕಳ ಮೆರವಣಿಗೆ ಪತಾಕೆಯ ನಿಶಾನೆ ತೋರಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯದ ಭವಿಷ್ಯದ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಆಲ್ವಿನ್ ದಾಂತಿ, ಫೆಲ್ಸಿ ಲೋಬೊ, ವೆಂಕಟೇಶ ನಾಯಕ್ ಪ್ರಬಂಧ ಮಂಡಿಸಿದರು. ಆಂಡ್ರ್ಯೂ ಎಲ್. ಡಿಕುನ್ಹಾ ಕವಿತಾ ರಚನೆ ಬಗ್ಗೆ ಮಾಹಿತಿ ನೀಡಿ ವಾಚಿಸುವ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು.
ಕೊಂಕಣಿ ರಸಪ್ರಶ್ನೆಯನ್ನು ಅರುಣ್ ರಾಜ್ ರೊಡ್ರಿಗಸ್ ನಡೆಸಿಕೊಟ್ಟರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡುಗಳು, ನೃತ್ಯ, ಗುಮಟೆ ವಾದನ ನಡೆಯಿತು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ನವೀನ್ ಲೋಬೊ ಉಪಸ್ಥಿತರಿದ್ದರು. ನಿನಿಶಾ ಪ್ರಿಶಾ ಮೊಂತೇರೊ, ಕ್ರಿಶೆಲ್ ಡಿ.ಆಲ್ಮೇಡಾ, ಆರ್ವಿನ್ ನೀಲ್ ಡಿಸೋಜ, ಲೆನೊರಾ ಈವಾ ಮಸ್ಕರೇನ್ಹಸ್, ಲರಿಸ್ಸ ಡಿಸೋಜ, ಲೆನೊರಾ ಕ್ರಿಶೆಲ್ ಡಿಸೋಜ, ರೀನಲ್ ರಿನ್ಸಿಯಾ ಸೆರಾವೊ, ಡೆಲಿಶಾ ಮರಿನಾ ಡಿಸೋಜ, ಜೆಸ್ಸಿಕಾ ಶೈನಾ ಡಿಸೋಜ, ರತನ್ ಆರ್. ಭಟ್, ಶೊನಾ ಪಿಂಟೊ, ಏಂಜಲ್ ವಿಯಾನ್ನಾ ಪಿಂಟೊ,ವಿಯೊನ್ ಕ್ರಿಸ್ ಮಾರ್ಟಿಸ್, ಜೆನಿಶಾ ನಜ್ರೆತ್ ಮತ್ತಿತರರು ಪಾಲ್ಗೊಂಡಿದ್ದರು.







