ಮಂಗಳೂರು | ನ.29ರಂದು ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ-ಪ್ರಶಸ್ತಿ ಪ್ರದಾನ

ಮಂಗಳೂರು, ನ.26: ಯಕ್ಷ ಪ್ರತಿಭೆ ಮಂಗಳೂರು ಇದರ 17ನೇ ವರ್ಷದ ಸಂಭ್ರಮ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ-ಪ್ರಶಸ್ತಿ ಪ್ರದಾನ-ಅಭಿನಂದನಾ ಕಾರ್ಯಕ್ರಮ ನ. 29ರಂದು ಸಂಜೆ 5:45ರಿಂದ ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಸಂಘಟಕರಾದ ಸಂಜಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ವರುಷದ ಅಸ್ರಣ್ಣ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಯಕ್ಷ ಪ್ರತಿಭೆಯಿಂದ ಕೊಡ ಮಾಡುವ ಗೌರವ ಪ್ರಶಸ್ತಿಯನ್ನು ಅದಾನಿ ಗ್ರೂಪ್ ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವವರವರಿಗೆ ‘ಸಾಧಕ ರತ್ನ ಎಂಬ ಬಿರುದನಿತ್ತು ಪ್ರದಾನಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ‘ಕಾಯಕ ರತ್ನ’ಎಂಬ ಬಿರುದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಯಕ್ಷ ಸಮ್ಮಾನವನ್ನು ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರದ ಪ್ರತಿಭಾವಂತ ಕಲಾವಿದ ಸದಾಶಿವ ಆಳ್ವ ತಲಪಾಡಿ ಅವರಿಗೆ, ಯುವಪ್ರತಿಭೆ ವಾರುಣಿ ನಾಗರಾಜ ಆಚಾರ್ಯ ಮಂಗಳಾದೇವಿ ಇವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಪ್ರಶಸ್ತಿ ಪ್ರದಾನ ಮಾಡಲಿರುವರು
ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ವಚನದ ನೀಡಲಿರುವರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು ಎಂದರು. ಸುಧಾಕರ ರಾವ್ ಪೇಜಾವರ ಸಂಸ್ಮರಣಾ ಭಾಷಣ ಮಾಡಲಿರುವರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ವಕೀಲ ಮೋಹನದಾಸ್ ರೈ, ಯಕ್ಷಗಾನ ಕಲಾವಿದರಾದ ರವಿ ಅಲೆವೂರಾಯ, ಅಶೋಕ್ ಶೆಟ್ಟಿ, ಸುಜತಾ ಆಳ್ವ ಉಪಸ್ಥಿತರಿದ್ದರು.







