ಮಂಗಳೂರು | ಎಂಸಿಎಫ್ ಮರುನಾಮಕರಣಕ್ಕೆ ಆಗ್ರಹಿಸಿ ಮನವಿ

ಮಂಗಳೂರು, ಡಿ.12: ಎಂಸಿಎಫ್ ಹೆಸರು ಉಳಿಸಿ ವೇದಿಕೆ ಸದಸ್ಯರು ಪಾರಾದೀಪ್ ಫಾಸ್ಫೇಟ್ಸ್ ನಿಯಮಿತ (ಹಿಂದಿನ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ ನಿಯಮಿತ) ಇದರ ಪಣಂಬೂರು ಆಡಳಿತ ಕಚೇರಿಗೆ ತೆರಳಿ ಎಂಸಿಎಫ್ ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಸಾರ್ವಜನಿಕರ ಮತ್ತು ಮಾಜಿ ಉದ್ಯೋಗಿಗಳ ಪರವಾಗಿ ಸಲ್ಲಿಸಲಾದ ಮನವಿಯನ್ನು ಆಡಳಿತ ಮಂಡಳಿಯ ಪರವಾಗಿ ಎಚ್.ಆರ್. ಜಿಎಂ ಚೇತನ್ ಮೆಂಡೋನ್ಸಾ ಅಹವಾಲು ಸ್ವೀಕರಿಸಿದರು.
ಮ್ಯಾಕ್ಸಿಮ್ ಆಲ್ಫ್ರೆಡ್ ಡಿಸೋಜ ಮಾತನಾಡಿ, 50 ವರ್ಷಗಳಿಂದ ಅಸ್ತಿತ್ವದಲ್ಲಿರುವ ಸಾವಿರಾರು ಸ್ಥಳೀಯ ಯುವ ಜನರಿಗೆ ಉದ್ಯೋಗ ನೀಡುತ್ತಿದ್ದ ಮತ್ತು ಇಲ್ಲಿನ ನೆಲದೊಂದಿಗೆ, ಸಮುದಾಯದೊಂದಿಗೆ ಅವಿನಾನುಭವ ಸಂಬಂಧ ಹೊಂದಿದ್ದ ಎಂಸಿಎಫ್ ಹೆಸರನ್ನು ರಾತ್ರೋರಾತ್ರಿ ಅಳಿಸಿ ಅದರ ಜಾಗದಲ್ಲಿ ಪಾರಾದೀಪ್ ಫಾಸ್ಫೇಟ್ಸ್ ಹೆಸರನ್ನು ಹೇರಿರುವುದರ ಬಗ್ಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದರು.
ಇದು ಕೇವಲ ಕೆಲ ಜನರ ಮನಸ್ಸಿನ ನೋವು ಅಲ್ಲ. ಇದು ಸ್ಥಳೀಯ ಸಮುದಾಯ, ರಾಜ್ಯದ ಜನತೆಯ, ಹಿಂದಿನ ಮತ್ತು ಪ್ರಸ್ತುತ ಉದ್ಯೋಗದಲ್ಲಿರುವ ಪ್ರತಿಯೊಬ್ಬರಿಗೂ ನೋವಿನ ಸಂಗತಿಯಾಗಿದೆ. ಕೈಗಾರಿಕಾ ಸಂಸ್ಥೆಯೊಂದು ತಾನು ಕಾರ್ಯಚರಿಸುವ ಪ್ರದೇಶದ ಸಮುದಾಯದಿಂದ ಪ್ರತ್ಯೇಕತೆಯನ್ನು ಬಯಸಲು ಸಾಧ್ಯವಿಲ್ಲ. ಹೆಸರು ಮರುಸ್ಥಾಪನೆಯಿಂದ ಸಂಸ್ಥೆ ಮತ್ತು ಸಮುದಾಯ ಜೊತೆಯಾಗಿ ಮುನ್ನಡೆಯಬಹುದೆಂದು ಹೇಳಿದರು.
ಶಿವರಾಂ ಶೆಟ್ಟಿ ನಾತಬಾಡಿ ಮಂಗಳೂರಿನಲ್ಲಿ ಸ್ಥಳೀಯ ಹೂಡಿಕೆದಾರರಿಂದ ಸ್ಥಾಪಿತವಾದ ಸಂಸ್ಥೆಯ ಆಡಳಿತ ಹೊರಗಿನ ಇನ್ನೊಂದು ಸಂಸ್ಥೆಯ ಸಂಪೂರ್ಣ ನಿಯಂತ್ರಣಕ್ಕೆ ಹೋದರೆ ಸ್ಥಳೀಯ ಯುವ ಜನರು ಉದ್ಯೋಗ ವಂಚಿತರಾಗಲಿದ್ದಾರೆ. ಹೆಸರು ಬದಲಾವಣೆ ಅದನ್ನು ಇನ್ನಷ್ಟು ಜನರಿಂದ ದೂರ ಮಾಡಲಿದೆ. ನಮಗೆ ಎಂಸಿಎಫ್ ಬದುಕನ್ನು ರೂಪಿಸಿದ ದ್ಯೋತಕವಾಗಿದೆ ಎಂದರು.
ಸಂಸ್ಥೆಯ ಮೊದಲ ಬ್ಯಾಚ್ ಉದ್ಯೋಗಿ ವೈ.ಎಂ. ದೇವದಾಸ್ ಎಂಸಿಎಫ್ ನ ಪರಂಪರೆ ಮತ್ತು ಆ ಹೆಸರಿನೊಡನೆ ಬೆಳೆದ ನಂಟಿನ ಬಗ್ಗೆ ಮಾತನಾಡಿದರು.
ಎಂಸಿಎಫ್ ಹೆಸರು ಉಳಿಸಿ ವೇದಿಕೆಯ ಪರವಾಗಿ ದಯಾನಂದ ಶೆಟ್ಟಿ, ಮುಹಮ್ಮದ್ ಆಲಿ, ಸಾಯಿನಾಥ್ ಸಾವಂತ್ ಮತ್ತಿತರಿದ್ದರು.







