ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಫಿಸಿಯೋಥೆರಪಿ ವಿಶೇಷ ಘಟಕ ಸ್ಥಾಪಿಸಿ: ಸರಕಾರಕ್ಕೆ ರಾಜ್ಯಪಾಲ ಗೆಹ್ಲೋಟ್ ಸಲಹೆ
ಮಂಗಳೂರು ಫಿಸಿಯೋಕಾನ್ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಮಂಗಳೂರು, ಸೆ.8: ರೋಗಿಯ ಶಾರೀರಿಕ ಹಾಗೂ ಮಾನಸಿಕ ಸಶಕ್ತೀಕರಣಕ್ಕಾಗಿ ಫಿಸಿಯೋಥೆರಪಿ ವೈದ್ಯಕೀಯ ಕ್ಷೇತ್ರದಲ್ಲಿ ಬಹು ಪ್ರಮುಖ ಚಿಕಿತ್ಸಾ ವ್ಯವಸ್ಥೆಯಾಗಿದ್ದು, ರಾಜ್ಯದ ಎಲ್ಲ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಫಿಸಿಯೋಥೆರಪಿಯ ಸದೃಢ ರೀತಿಯ ವಿಶೇಷ ಘಟಕಗಳನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಸೌತ್ ಕೆನರಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ವತಿಯಿಂದ ಫಿಸಿಯೋಥೆರಪಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗಾಗಿ ‘ಕನೆಕ್ಟ್ ಟು ಅನ್ಲಾಕ್ ದಿ ಪೊಟೆನ್ಶಿಯಲ್ ಆಫ್ ಫಿಸಿಯೋಥೆರಪಿ’ ವಿಷಯದಲ್ಲಿ ನಗರದ ಟಿಎಂಎ ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಆಯೋಜಿಸಿರುವ ಎರಡು ದಿನಗಳ ‘ಮಂಗಳೂರು ಫಿಸಿಯೋಕಾನ್ ಅಂತಾರಾಷ್ಟ್ರೀಯ ಸಮ್ಮೇಳನ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವರ್ತಮಾನದಲ್ಲಿ ಫಿಸಿಯೋಥೆರಪಿ ಜನಪ್ರಿಯತೆ ಹೆಚ್ಚುತ್ತಿದೆ. ಫಿಟ್ನೆಸ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಮಾಡುವ ಸಲುವಾಗಿ ದೇಶದ ಪ್ರಧಾನ ಮಂತ್ರಿ ಕೂಡಾ ಫಿಟ್ ಇಂಡಿಯಾ ಮೂವ್ ಮೆಂಟ್ ಆರಂಭಿಸಿದ್ದಾರೆ. ಆರ್ಥೋಪೆಡಿಕ್ ಕ್ಲಿನಿಕ್ಗಳು, ಆಸ್ಪತ್ರೆಗಳು, ಪುನರ್ವಸತಿ ಕೇಂದ್ರಗಳು ಹೆಚ್ಚುತ್ತಿದ್ದು, ರಕ್ಷಣೆ ಹಾಗೂ ಕ್ರೀಡಾ ವಿಭಾಗಕ್ಕೂ ಫಿಸಿಯೋಥೆರಪಿ ಪರಿಣಿತರ ಬೇಡಿಕೆ ವ್ಯಾಪಕವಾಗಿದೆ. ಯೋಗ ಮತ್ತು ವ್ಯಾಯಾಮವು ಭೌತಿಕ ಚಿಕಿತ್ಸೆಯಲ್ಲಿ ನಿಕಟ ಸಂಬಂಧವಿದ್ದು, ಫಿಸಿಯೋಥೆರಪಿ ಜತೆ ಯೋಗ ಮತ್ತು ವ್ಯಾಯಾಮಕ್ಕೂ ಒತ್ತು ನೀಡಬೇಕೆಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕರೆ ನೀಡಿದರು.
ಫಿಸಿಯೋಥೆರಪಿಸ್ಟ್ಗಳು ಶಾರೀರಿಕ ವೈಕಲ್ಯಗಳನ್ನು ಜೋಡಿಸುವ ಕೆಲಸ ಮಾತ್ರವಲ್ಲದೆ, ಮನೋವೈಜ್ಞಾನಿಕ ಸಮಸ್ಯೆಗಳನ್ನು ಎದುರಿಸುವಲ್ಲಿಯೂ ಸಹಕರಿಸುತ್ತಾರೆ. ಕೇಂದ್ರ ಸರಕಾರದಲ್ಲಿ ಏಳು ವರ್ಷಗಳ ಕಾಲ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಸಂದರ್ಭ ತಾನು ದಿವ್ಯಾಂಗರ ಸಶಕ್ತೀಕರಣದ ದೃಷ್ಟಿಯಿಂದ ಫಿಸಿಯೋಥೆರಪಿ ಚಿಕಿತ್ಸೆಗೆ ಮಹತ್ವ ನೀಡುವ ಕ್ರಮ ವಹಿಸಿದ್ದೇನೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ಕೆ.ರಮೇಶ್ ಮಾತನಾಡಿ, ರೋಗಿಯ ಜೀವನಶೈಲಿಯ ಬದಲಾವಣೆಯಲ್ಲಿ ಫಿಸಿಯೋರೆಪಿಸ್ಟ್ಗಳ ಪಾತ್ರ ಮಹತ್ತರವಾಗಿದೆ. ಹಾಗಾಗಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಫಿಸಿಯೋಥೆರಪಿಸ್ಟ್ಗಳನ್ನು ಹೊಂದುವುದು ಅತೀ ಮುಖ್ಯ ಎಂದರು.
ಫಿಸಿಯೋಥೆರಪಿಸ್ಟ್ಗಳ ಭಾರತೀಯ ಅಸೋಸಿಯೇಶನ್ ನ ಅಂತಾರಾಷ್ಟ್ರೀಯ ವ್ಯವಹಾರಗಳ ಅಧ್ಯಕ್ಷ ಡಾ.ಅಲಿ ಇರಾನಿ ಮಾತನಾಡಿ, ರಾಜ್ಯದಲ್ಲಿ ಫಿಸಿಯೋ ಮಂಡಳಿ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.
ಫಿಸಿಯೋಥೆರಪಿಸ್ಟ್ಗಳ ಭಾರತೀಯ ಅಸೋಸಿಯೇಶನ್ ಅಧ್ಯಕ್ಷ ಡಾ.ಸಂಜೀವ್ ಕೆ. ಝಾ ಮಾತನಾಡಿ, ಫಿಸಿಯೋಥೆರಪಿಸ್ಟ್ಗಳ ಶಿಕ್ಷಣದಲ್ಲಿ ಒಂದು ದೇಶ ಒಂದು ಪಠ್ಯಕ್ರಮ ಶೀಘ್ರವೇ ಅನುಷ್ಠಾನಗೊಳ್ಳಲಿದೆ. 2030ರ ವೇಳೆ ಫಿಸಿಯೋಥೆರಪಿಯನ್ನು ವೈದ್ಯಕೀಯ ಕ್ಷೇತ್ರದ ಪ್ರಮುಖ ವ್ಯವಸ್ಥೆಯಾಗಿ ನಾವು ತೋರಿಸಲಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಫಿಸಿಯೋಥೆರಪಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಫಿಸಿಯೋಥೆರಪಿ ಕಾಲೇಜುಗಳು ಸ್ಥಾಪನೆಯಾಗಬೇಕು ಎಂದು ಹೇಳಿದರು.
ಫಿಸಿಯೋಥೆರಪಿಸ್ಟ್ ಗಳು ಭರವಸೆಯ ಚಾಂಪಿಯನ್ ಗಳು
ಫಿಸಿಯೋಥೆರಪಿ ರೋಗಿಗಳ ಶಾರೀರಿಕ ನೋವನ್ನು ಕಡಿಮೆಗೊಳಿಸಿ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಫಿಸಿಯೋಥೆರಪಿಸ್ಟ್ ಗಳು ಕೇವಲ ಶಾರೀರಿಕ ಚಿಕಿತ್ಸಕರು ಮಾತ್ರವಲ್ಲ, ಅವರು ಭರವಸೆಯ ಚಾಂಪಿಯನ್ ಗಳು ಎಂದು ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ರುದ್ರಪ್ಪ ಪಾಟೀಲ್ ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಿ.ಎ.ಕಲ್ಪಜಾರಿಗೆ ಶ್ರೇಷ್ಠ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನ ಸಂಚಾಲಕ ಡಾ.ಮುಹಮ್ಮದ್ ಸುಹೈಲ್ ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.







