ಮಂಗಳೂರು| ಹೊಸ ವರ್ಷಾಚರಣೆಯ ವೇಳೆ ಪೊಲೀಸರಿಂದ ಕಾರ್ಯಾಚರಣೆ; 52 ಮಂದಿ ಮಾದಕ ವಸ್ತು ಸೇವಿಸಿರುವುದು ದೃಢ

ಫೈಲ್ ಫೋಟೊ
ಮಂಗಳೂರು, ಜ.1: ಹೊಸ ವರ್ಷಾಚರಣೆಯ ವೇಳೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ 52 ಮಂದಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಪೊಲೀಸರ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಒಟ್ಟು 1,000 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 52 ಮಂದಿ ಮಾದಕ ವಸ್ತು ಸೇವಿಸಿರುವುದು ಗೊತ್ತಾಗಿದೆ. 52 ಮಂದಿಯಲ್ಲಿ ಪೈಕಿ 25 ಮಂದಿ ವಿದ್ಯಾರ್ಥಿಗಳು (2 ಸ್ಥಳಿಯರು, 23 ಹೊರ ಜಿಲ್ಲೆಯವರು), ವಿದ್ಯಾಥಿಗಳಲ್ಲದವರು 17 ಮಂದಿ (ಕಾರ್ಮಿಕರು 17, ನಾನಾ ಕೆಲಸ ನಿರತರು 10) ಸೇರಿದ್ದಾರೆ.
ಮಾದಕ ವಸ್ತು ಸೇವಿಸಿ ಸಿಕ್ಕಿ ಬಿದ್ದವರಿಗೆ ಕೌನ್ಸೆಲಿಂಗ್ ಮತ್ತು ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಾಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಮಂಗಳೂರಿಗೆ ಮಾದಕ ವಸ್ತುಗಳು ಹರಿದು ಬರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಡಿ.30ರಂದು ನಗರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದರು.
ಒಬ್ಬ ಆರೋಪಿಯ ವಶದಲ್ಲಿ 50 ಗ್ರಾಂ ಎಂಡಿಎಂ ಮತ್ತು ಇಬ್ಬರಲ್ಲಿ 200 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು. ಮೂವರೂ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ . ಇವರ ಬಂಧದೊಂದಿಗೆ ಸರಬರಾಜು ಜಾಲಗಳನ್ನು ಕಿತ್ತುಹಾಕುವ ನಿಟ್ಟಿನಲ್ಲಿ ಪೊಲೀಸರು ಗಮನ ಹರಿಸಿದ್ದರು.
ಮಂಗಳೂರಿನ ಸ್ಥಳೀಯ ನಾಗರಿಕರ ಮತ್ತು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ, ಒಗ್ಗಟ್ಟಿನಿಂದ ಕಾರ್ಯ ಪ್ರವೃತ್ತರಾದರೆ ಮಾದಕ ವಸ್ತುಗಳ ಪಿಡುಗನ್ನು ತೊಡೆದು ಹಾಕಲು ಮತ್ತು ಮಂಗಳೂರು ನಗರವನ್ನು ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿಡಬಹುದು ಎಂಬ ವಿಶ್ವಾಸ ನಮಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







