Mangaluru | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮಾಲಿ ಕಾರ್ಮಿಕರ ಧರಣಿ

ಮಂಗಳೂರು: ಹಮಾಲಿ ಕಾರ್ಮಿಕರಿಗೆ ಭವಿಷ್ಯ ನಿಧಿ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಮುಂದಿನ ಕರ್ನಾಟಕ ಬಜೆಟಿನಲ್ಲಿ ಹಮಾಲಿ ಕಲ್ಯಾಣ ಮಂಡಳಿ ರಚನೆಗೆ 500 ಕೋಟಿ ಮೀಸಲಿಡಲು ಆಗ್ರಹಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಕರೆಯಂತೆ ಇಂದು ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ಹಳೇ ಬಂದರು ಸಗಟು ಮಾರುಕಟ್ಟೆಯಲ್ಲಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರ ಕಟ್ಟೆ ಬಳಿ ಹಮಾಲಿ ಕಾರ್ಮಿಕರು ಧರಣಿ ನಡೆಸಿದರು.
ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಕಾರ್ಯದರ್ಶಿ ಮತ್ತು ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಅತ್ಯಂತ ಶ್ರಮ ಜೀವಿಗಳಾದ ಹಮಾಲಿ ಕಾರ್ಮಿಕರ ಶ್ರಮದಿಂದಾಗಿ ಮಾರುಕಟ್ಟೆಗಳು ಕ್ರಿಯಾಶೀಲಗೊಂಡು ಆರ್ಥಿಕ ಚೈತನ್ಯ ಪಡೆಯಲು ಸಾಧ್ಯವಾಗಿದೆ ಹಮಾಲಿ ಕಾರ್ಮಿಕರ ಶ್ರಮಕ್ಕೆ ನ್ಯಾಯ ಕೊಡಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ರಾಜ್ಯದ ವಿವಿಧ ಎಪಿಎಂಸಿ, ಗೋಡೌನ್, ವೇರ್ ಹೌಸ್ ಹಾಗೂ ನಗರ, ಗ್ರಾಮೀಣ ಬಝಾರ್ ಗಳಲ್ಲಿ ದುಡಿಯುವ ಲಕ್ಷಾಂತರ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಸರಕಾರ ನಿರಂತರವಾಗಿ ಕಡೆಗಣಿಸುತ್ತಿದೆ. ಅತ್ಯಂತ ಬಡವರಾಗಿರುವ ಹಮಾಲಿ ಕಾರ್ಮಿಕರಿಗೆ ಪಿಂಚಣಿ, ಭವಿಷ್ಯ ನಿಧಿ ಮತ್ತು ನಿವೃತ್ತಿ ವೇತನ ಯೋಜನೆ ಜಾರಿಗೊಳಿಸಲು ಕ್ರಮ ಜರುಗಿಸಬೇಕು ಮತ್ತು ಕೇರಳ ಮತ್ತು ಮಹಾರಾಷ್ಟ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಿ ಮುಂದಿನ ಬಜೆಟಿನಲ್ಲಿ 500ಕೋಟಿ ಅನುದಾನ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಬಂದರು ಶ್ರಮಿಕರ ಸಂಘದ ಮುಖಂಡರಾದ ಫಾರೂಕ್ ಉಳ್ಳಾಲಬೈಲ್, ಮೋಹನ್ ಕುಂಪಲ, ಲೋಕೇಶ್ ಶೆಟ್ಟಿ ಶಮೀರ್ ಬೋಳಿಯಾರ್, ಮಜೀದ್ ಉಳ್ಳಾಲ, ಶರಣಪ್ಪ, ಸಿದ್ದೀಕ್ ಬೆಂಗ್ರೆ, ಪದ್ಮನಾಭ, ಅಬ್ಬಾಸ್, ಅಕ್ಬರ್ ಮತ್ತಿತರರು ಉಪಸ್ಥಿತರಿದ್ದರು.







