ಮಂಗಳೂರು | ಸರಕಾರದ ಸುತ್ತೋಲೆಗಳ ಸಮರ್ಪಕ ಅನುಷ್ಠಾನದಿಂದ ಕಸಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣ : ವಿಜಯಲಕ್ಷ್ಮಿ

ಮಂಗಳೂರು,ಡಿ.6 : ಸರಕಾರದ ಸುತ್ತೋಲೆಗಳ ಸಮರ್ಪಕ ಅನುಷ್ಠಾನದಿಂದ ಕಸಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.
ಅವರು ಶನಿವಾರ ಮುಡಿಪು ಜನಶಿಕ್ಷಣ ಟ್ರಸ್ಟ್ ನಲ್ಲಿ ನಡೆದ ಬಯಲು ಕಸಾಲಯ ಅವಲೋಕನ, ಸರ್ಕಾರದ ಆದೇಶಗಳು ಮತ್ತು ಜಿಲ್ಲಾ ಪಂಚಾಯತ್ ಸುತ್ತೋಲೆಗಳ ಅರಿವು ಅನುಷ್ಠಾನ, ಕಸಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣ ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆಲವು ಕಡೆ ಕಸನಿರ್ವಹಣೆಯಲ್ಲಿ ಲೋಪ ದೋಷಗಳಿವೆ. ಈ ಹಿನ್ನೆಲೆಯಲ್ಲಿ ಉಳ್ಳಾಲದಂತಹ ಪ್ರದೇಶದಲ್ಲಿ ಸಣ್ಣ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿ ತೀರಾ ಒಳರಸ್ತೆಗಳಲ್ಲಿರುವ ಮನೆಗಳಿಗೆ ಹೋಗಿ ಕಸ ಸಂಗ್ರಹ ಮಾಡಲು ಯೋಚಿಸ ಲಾಗುತ್ತಿದೆ ಎಂದು ವಿಜಯಲಕ್ಷ್ಮಿ ವಿವರಿಸಿದರು.
ಸರ್ಕಾರದ ಸುತ್ತೋಲೆಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬಳಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಸಂವಾದದಲ್ಲಿ ರಾಧಾಕೃಷ್ಣ ರೈ ಉಮಿಯ ಮಾತನಾಡಿ, ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಬಗ್ಗೆ ಸಭೆ, ಸಮಾರಂಭಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಅಧಿಕಾರಿಗಳು, ಜನಪ್ರತಿನಿಧಿಗಳು ಜವಾಬ್ದಾರಿ ವಹಿಸಬೇಕು. ಧಾರ್ಮಿಕ ಕಾರ್ಯಕ್ರಮ, ಸಭೆ, ಸಮಾರಂಭಗಳ ಸಂದರ್ಭ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಬೇಕೆಂದು ರಾಧಾಕೃಷ್ಣ ರೈ ಉಮಿಯ ಸಲಹೆ ನೀಡಿದರು.
ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರಂತರ ಜಾಗೃತಿ ಮೂಡಿಸಬೇಕು. ಸಭೆ ನಡೆಸಿದರೆ ಸಾಲದು. ಮಸೀದಿಗಳಲ್ಲೂ ಈ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ಭರವಸೆ ನೀಡಿದರು.
ಬಾಳೆಪುಣಿ ಮೊದಲು ಸ್ವಚ್ಛ ಗ್ರಾಮ ಆಗಬೇಕು ಎಂದು ಇಬ್ರಾಹಿಂ ತಪ್ಷಿಯಾ ಅಭಿಪ್ರಾಯಪಟ್ಟರು.
ಸ್ವಚ್ಛತಾ ಘಟಕ ಸ್ಥಾಪನೆಗೆ ಮುಂದಾದಾಗ ಜನ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಸ್ಥಳೀಯ ಐದು ಗ್ರಾಮ ಪಂಚಾಯಿತಿಗಳಿಗೆ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಎಂ.ಕೆ.ಅಶ್ರಫ್ ಮನವಿ ಮಾಡಿದರು.
ಪ್ಲಾಸ್ಟಿಕ್ ಶಿಕ್ಷಣ ಪಠ್ಯದಲ್ಲಿ ಬಂದರೆ ಶಾಲಾ ಮಟ್ಟದಲ್ಲಿ ಜಾಗೃತಿ ಸಾಧ್ಯ ಎಂದು ಮುತ್ತಪ್ಪ ಹೇಳಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ಧಾರ್ಮಿಕ ಕೇಂದ್ರಕ್ಕೆ ಹೋಗುವುದರಿಂದ ಜನರ ಮನಸ್ಥಿತಿ ಬದಲಾಯಿಸಲು ಧಾರ್ಮಿಕ ಕೇಂದ್ರಗಳಿಂದಲೇ ಸಾಧ್ಯ ಎಂದು ಗುರುದತ್ ತಿಳಿಸಿದರು.
ಜನಜೀವನ ಅಧ್ಯಕ್ಷ ರಮೇಶ್ ಶೇಣವ, ಕಾರ್ಯಾಧ್ಯಕ್ಷ ರಾಧಾಕೃಷ್ಣ ರೈ ಉಮಿಯ, ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಜಮೀಯತುಲ್ ಫಲಾಹ್ ಜಿಲ್ಲಾ ಕೋಶಾಧಿಕಾರಿ ಕೆ.ಕೆ.ನಾಸೀರ್ ನಡುಪದವು, ಉಳ್ಳಾಲ ತಾಲೂಕು ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಬಾಪು ಘನ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷ ಇಬ್ರಾಹಿಂ ತಪ್ಷಿಯಾ ನಡುಪದವು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಸಜಿಪನಡು ಗ್ರಾ.ಪಂ. ಪಿಡಿಓ ಕೇಶವ ಪೂಜಾರಿ ಪಾವೂರು, ಇರಾ ಗ್ರಾ.ಪಂ. ಅಧ್ಯಕ್ಷ ಉಮ್ಮರ್, ಹರೇಕಳ ಗ್ರಾ.ಪಂ. ಅಧ್ಯಕ್ಷೆ ಗುಲಾಬಿ, ಪಿಡಿಓ ಮುತ್ತಪ್ಪ ಡಿ. ಬೆಳ್ಮ ಗ್ರಾ.ಪಂ. ಪಿಡಿಓ ರಮೇಶ್ ನಾಯ್ಕ್, ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ಇಕ್ಬಾಲ್, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ದೊಂಬಯ್ಯ ಇಡ್ಕಿದು, ಬಾಳೆಪುಣಿ ಗ್ರಾ.ಪಂ. ಸದಸ್ಯೆ ಸಮೀಮಾ, ಬೋಳಿಯಾರ್ ಗ್ರಾ.ಪಂ. ಪಿಡಿಓ ಸುಧಾರಾಣಿ, ಮಂಜನಾಡಿ ಪಿಡಿಓ ರಮ್ಯ, ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಕುಂದರ್, ಪಿಡಿಓ ರಜನಿ, ಕಾರ್ಯನಿರತ ಪತ್ರಕರ್ತರ ಸಂಘದ ದ.ಕ.ಜಿಲ್ಲಾಧ್ಯಕ್ಷ ಬಿ.ಎನ್. ಪುಷ್ಪರಾಜ್, ಸ್ವಚ್ಛತಾ ಸೇನಾನಿ ಓಸ್ವಲ್ಡ್ ಸಲ್ದಾನ ಪುತ್ತೂರು, ಬಾಳೆಪುಣಿ ಗ್ರಾ.ಪಂ. ಸದಸ್ಯೆ ಸೆಮೀಮಾ, ಪುತ್ತೂರು ಕಡಬ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕುರ್ನಾಡು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಗಟ್ಟಿ, ಉಪಾಧ್ಯಕ್ಷ ಎಂ.ಕೆ.ಅಶ್ರಫ್, ಮಾಜಿ ಅಧ್ಯಕ್ಷ ಗಣೇಶ್ ನಾಯಕ್, ಸ್ವಚ್ಛತಾ ಸೇನಾನಿ ಅಬೂಬಕ್ಕರ್ ಜಲ್ಲಿ ಇನ್ನಿತರರು ಉಪಸ್ಥಿತರಿದ್ದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.







