ಮಂಗಳೂರು | ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಸೃಷ್ಟಿನೋವಾ ಕಾರ್ಯಕ್ರಮ

ಮಂಗಳೂರು, ಡಿ.13: ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 14ನೇ ವಾರ್ಷಿಕೋತ್ಸವ ಸೃಷ್ಟಿನೋವಾ ಕಾರ್ಯಕ್ರಮವು ವಿಜ್ಞಾನ ಮತ್ತು ಪ್ರಕೃತಿಯ ಅನುಬಂಧ ಎಂಬ ಸಂದೇಶದೊಂದಿಗೆ ಶುಕ್ರವಾರ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ, ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಮನೆಯ ವಾತಾವರಣ, ಪೋಷಕರ ಮೌಲ್ಯಗಳ ಪ್ರಸಾರ, ಭಾವನಾತ್ಮಕ ಬೆಂಬಲದ ಮೂಲಕ ಮಗುವಿನ ನಡವಳಿಕೆ, ಅರಿವಿನ ಸಾಮಾರ್ಥ್ಯ ಇತ್ಯಾದಿ ಗುಣಗಳು ರೂಪುಗೊಳ್ಳುತ್ತದೆ ಎಂದರು.
ಸಂತ ಅಲೋಶಿಯಸ್ ಸಂಸ್ಥೆಯ ರೆ.ಫಾ. ಮೆಲ್ವಿನ್ ಪಿಂಟೋ ಎಸ್.ಜೆ. ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲಾತಾಣಗಳ ಆಮಿಷಕ್ಕೆ ಬಲಿಯಾಗದೆ ಅಮೂಲ್ಯ ಸಮಯವನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ತಮ್ಮಲ್ಲಿರುವ ಜಡತೆಯನ್ನು ಹೊರದೂಡಬೇಕು. ಸೃಷ್ಟಿನೋವಾ ವಿಜ್ಞಾನ ಮತ್ತು ಪ್ರಕೃತಿಯ ಅನುಬಂಧದಂತೆ, ಪ್ರಕೃತಿಯ ಮೌನದ ಹಿಂದಿನ ಮಾತಾಗಬೇಕು ಎಂದರು.
ಶಾಲೆಯ ಪ್ರಾಂಶುಪಾಲ ಫಾ. ರೋಹನ್ ಡಿ ಅಲ್ಮೇಡಾ ಎಸ್.ಜೆ.ಮಾತನಾಡಿದರು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಪ ಪ್ರಾಂಶುಪಾಲೆ ಲಾರೆಲ್ ಡಿಸೋಜ, ಅಪರ್ಣಾ ಸುರೇಶ್, ಶಾಲಾ ಪೋಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ರೀನಾ ನೊರೊನ್ಹಾ, ಕಾರ್ಯಕ್ರಮ ಸಂಯೋಜಕಿ ದೀಪ್ತಿ ಸಹನಾ ಕರ್ಕಡ, ಶಿಲ್ಪ ಬಲ್ಲಾಳ್, ಸುಶ್ಮಿತಾ ಕೆ. ಎಸ್., ಬೀನಾ ಪಾಯಸ್, ಗಾಯತ್ರಿ ತಂತ್ರಿ, ಆವ್ರಿಲ್ ಜೆ. ರೆಬೆಲ್ಲೊ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರೆಹಾನ್ ವಿ.ಕೆ. ಹಾಗೂ ಇಸಾಬೆಲ್ ಜೋಸ್ಟರ್ ಕಾರ್ಯಕ್ರಮ ನಿರೂಪಿಸಿದರು.







