ಮಂಗಳೂರು | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲಸಿಕೆ ಹಾಕಿಸಲು ಮಾಹಿತಿ ನೀಡಲು ತಹಶೀಲ್ದಾರ್ ಸೂಚನೆ

ಸಾಂದರ್ಭಿಕ ಚಿತ್ರ
ಮಂಗಳೂರು,ಡಿ.6: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು, ಗಣಿಗಾರಿಕೆ ಕಾರ್ಮಿಕರ ಮಕ್ಕಳು, ಜಲ್ಲಿ ಒಡೆಯುವ ಕಾರ್ಮಿಕರ ಮಕ್ಕಳು ಹಾಗೂ ಇತರ ವಲಸೆ ಪ್ರದೇಶಗಳಲ್ಲಿ ಮಕ್ಕಳನ್ನು ಗುರುತಿಸಿ ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಕ್ರಮವಹಿಸಬೇಕು ಎಂದು ಮಂಗಳೂರು ತಹಶೀಲ್ದಾರ್ ಟಿ. ರಮೇಶ್ ಬಾಬು ಸೂಚಿಸಿದರು.
ಮಂಗಳೂರು ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಪಂಗಳ ವ್ಯಾಪ್ತಿಯಲ್ಲಿ ಪೋಲಿಯೋ ಲಸಿಕೆ ನೀಡುವ ಸ್ಥಳ ಹಾಗೂ ದಿನಾಂಕದ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಕಾರ್ಮಿಕರ ಮಕ್ಕಳು ಪೋಲಿಯೋ ಲಸಿಕೆ ಹಾಕಿಸಿಕೊಳ್ಳಲು ಗುತ್ತಿಗೆದಾರರ ಸಂಘಗಳಿಗೆ ಮಾಹಿತಿ ನೀಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲು ಕ್ರಮ ವಹಿಸಬೇಕು ಎಂದು ಹೇಳಿದರು.
ಶಾಲಾ, ಕಾಲೇಜುಗಳ ಮುಖ್ಯಸ್ಥರು ಶೈಕ್ಷಣಿಕ ಸಂಸ್ಥೆಗಳ 100 ಮೀ. ಅಂತರದ ಗಡಿಯನ್ನು ತಂಬಾಕು ಮುಕ್ತ ಪ್ರದೇಶ ಎಂದು ಘೋಷಿಸುವ ನಾಮಫಲಕ ಅಳವಡಿಸಬೇಕು. ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಶಾಲಾ, ಕಾಲೇಜು ಮತ್ತು ಗ್ರಾಪಂ ಸಮನ್ವಯದೊಂದಿಗೆ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತವಾಗಿಸಲು ಕ್ರಮಜರುಗಿಸಬೇಕು ಎಂದು ರಮೇಶ್ ಬಾಬು ಹೇಳಿದರು.
ಕೊಟ್ಪಾಕಾರ್ಯಾಚರಣೆಯಡಿ 2024ರ ಡಿಸೆಂಬರ್ ನಿಂದ 2025ರ ಜೂನ್ ವರೆಗೆ 87 ಪ್ರಕರಣಗಳು ದಾಖಲಾಗಿದೆ. 22,700 ರೂ. ದಂಡ ಸಂಗ್ರಹಿಸಲಾಗಿದೆ. ಕರ್ನಾಟಕದಲ್ಲಿ 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಾಲಸ್ವಾಸ್ಥ್ಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದಡಿ 18 ವರ್ಷದೊಳಗಿನ ಮಕ್ಕಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಮಂಗಳೂರು ತಾಲೂಕಿನಲ್ಲಿ 6 ಆರ್ಬಿಎಸ್ಕೆ ತಂಡಗಳು ಕಾರ್ಯನಿರ್ವಹಿಸುತ್ತಿದೆ. ಈ ತಂಡವು ಅಂಗನವಾಡಿ ಕೇಂದ್ರಗಳಲ್ಲಿನ 6 ವರ್ಷದೊಳಗಿನ ಮಕ್ಕಳು ಹಾಗೂ ಸರಕಾರಿ/ಸರಕಾರಿ ಅನುದಾನಿತ/ಸರಕಾರಿ ವಸತಿ ಶಾಲೆ/ಕಾಲೇಜುಗಳಲ್ಲಿನ 1-12ನೇ ತರಗತಿಯ ಮಕ್ಕಳಿಗೆ 40 ವಿಧದ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ, ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಮಾಹಿತಿ ನೀಡಿದರು.







