ಜ.9ರಿಂದ 11ರವರೆಗೆ ಮಂಗಳೂರಿನಲ್ಲಿ ‘ಹಕ್ಕಿ ಹಬ್ಬ’

ಸಾಂದರ್ಭಿಕ ಚಿತ್ರ (Grok)
ಮಂಗಳೂರು, ಜ.7: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜ.9ರಿಂದ 11ರವರೆಗೆ ಮಂಗಳೂರಿನಲ್ಲಿ 12ನೇ ಆವೃತ್ತಿಯ ‘ಹಕ್ಕಿ ಹಬ್ಬ’ವನ್ನು(ಬರ್ಡ್ ಫೆಸ್ಟಿವಲ್) ಆಯೋಜಿಸಿದೆ.
ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ಯುವಜನರಲ್ಲಿ ವಿವಿಧ ಪಕ್ಷಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ. ಹಲವು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಈ ಹಿಂದೆ 2018ರಲ್ಲಿ ರಮಾನಾಥ ರೈ ಅರಣ್ಯ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಹಕ್ಕಿಹಬ್ಬ ಆಯೋಜಿಸಲಾಗಿತ್ತು. ಈ ವರ್ಷದ ಉತ್ಸವದ ಉದ್ಘಾಟನೆಯು ಪಿಲಿಕುಲದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ವರ್ಷದ ಹಕ್ಕಿ ಹಬ್ಬದ ಲಾಂಛನ ಜಿಲ್ಲೆಯ ಕರಾವಳಿಯಲ್ಲಿ ಕಂಡುಬರುವ ‘ಬಿಳಿ ಹೊಟ್ಟೆಯ ಕಡಲ ಹದ್ದು’ ಆಗಿರುತ್ತದೆ ಎಂದು ತಿಳಿಸಿದರು.
250 ಮಂದಿ ಭಾಗಿ
ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೊನಿ ಎಸ್. ಮರಿಯಪ್ಪ ಮಾತನಾಡಿ, ಹಕ್ಕಿ ಹಬ್ಬವು ಪಕ್ಷಿ ಪ್ರೇಮಿಗಳಿಗೆ ಮಾಹಿತಿ ಮತ್ತು ಜ್ಞಾನ ವಿನಿಮಯದ ವೇದಿಕೆಯಾಗಿದೆ. ನಗರದ ನಾಲ್ಕು ಕಾಲೇಜುಗಳ 180 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆಯಾಗಿ ಪಕ್ಷಿ ತಜ್ಞರು ಸೇರಿದಂತೆ ಸುಮಾರು 250 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿವಿಧ ಪರಿಸರ ವ್ಯವಸ್ಥೆಗಳಲ್ಲಿ ಒಟ್ಟು 12 ಪಕ್ಷಿ ವೀಕ್ಷಣಾ ಪಥಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
420 ಪ್ರಭೇದಗಳು
ಪ್ರತಿದಿನ ನಾಲ್ಕು ಪಕ್ಷಿ ವೀಕ್ಷಣಾ ಅವಧಿಗಳಿರುತ್ತವೆ. ಪಾಲ್ಗೊಳ್ಳುವವರನ್ನು 10 ತಂಡಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡವು ಗುರುತಿಸಲಾದ ಎಲ್ಲಾ ಪಥಗಳನ್ನು ಸಂದರ್ಶಿಸಲಿದೆ. ಪ್ರತೀ ಅವಧಿಯ ಆನಂತರ ತಜ್ಞರೊಂದಿಗೆ ಸಂವಾದ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ವಲಸೆ ಹಕ್ಕಿಗಳು ಸೇರಿದಂತೆ ಒಟ್ಟು 420 ಪಕ್ಷಿ ಪ್ರಭೇದಗಳು ದಾಖಲಾಗಿವೆ ಎಂದು ಆ್ಯಂಟೊನಿ ಮರಿಯಪ್ಪ ತಿಳಿಸಿದರು.
ಜಾಗೃತಿ ಕಾರ್ಯಕ್ರಮಗಳು
ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಶಾಲೆಟ್ ಪಿಂಟೋ ಮಾತನಾಡಿ, ಮಂಡಳಿಯು ಶಾಲೆಗಳಲ್ಲಿ ಹಾವು ಕಡಿತ ತಡೆಗಟ್ಟುವಿಕೆ, ಹಾವುಗಳ ಸಂರಕ್ಷಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ಪುನಶ್ಚೇತನಗೊಳಿಸಲು ಬಯಸಿದ್ದೇನೆ. ಪ್ರಸಕ್ತ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಚಾರಣ ಪಥಗಳನ್ನು ಮತ್ತೆ ಮಂಡಳಿಯ ವ್ಯಾಪ್ತಿಗೆ ತರುವ ಉದ್ದೇಶವಿದೆ ಎಂದು ಅವರು ಹೇಳಿದರು. ರಾಜ್ಯದ 40 ಚಾರಣ ಪಥಗಳಲ್ಲಿ ಆರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಪ್ರಕೃತಿ ತಜ್ಞ ರಾಹುಲ್, ಸಿಬಂದಿ ಲಾವಣ್ಯಾ ಉಪಸ್ಥಿತರಿದ್ದರು.







