ಮಂಗಳೂರು | ಟ್ರಕ್ ಚಾಲಕರಿಗೆ ಸಿಗದ ಟರ್ಮಿನಲ್ ಭಾಗ್ಯ!

ಸಾಂದರ್ಭಿಕ ಚಿತ್ರ PC | GROK
ಮಂಗಳೂರು, ಡಿ.7: ನಗರ ಹೊರವಲಯದ ಕುಳಾಯಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣವಾಗಲಿದೆ, ಇದರಿಂದ 1,500ಕ್ಕೂ ಅಧಿಕ ಟ್ರಕ್/ಲಾರಿಗಳಿಗೆ ನಿಲುಗಡೆ ವ್ಯವಸ್ಥೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಈ ಪ್ರಸ್ತಾವಕ್ಕೆ 22 ವರ್ಷಗಳೇ ಕಳೆದರೂ, ಅದಿನ್ನೂ ಕಾರ್ಯಗತಗೊಂಡಿಲ್ಲ. ಟ್ರಕ್/ಲಾರಿ ಚಾಲಕರು ಟರ್ಮಿನಲ್ ಭಾಗ್ಯದಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು.
ಮಂಗಳೂರು ನಗರವು ಕೈಗಾರಿಕೆ, ವಾಣಿಜ್ಯ ಹಬ್ ಆಗಿ ಬೆಳೆಯುತ್ತಿದೆ. ನವಮಂಗಳೂರು ಬಂದರು, ಒಎನ್ಜಿಸಿ-ಎಂಆರ್ಪಿಎಲ್, ಎಸ್ಇಝೆಡ್, ಬೈಕಂಪಾಡಿ, ಯೆಯ್ಯಾಡಿ ಕೈಗಾರಿಕಾ ಪ್ರದೇಶಗಳನ್ನು ಹೊಂದಿದೆ. ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್ ರಾಜ್ಯದ ನಾನಾ ಕಡೆಗಳಿಗೆ ಸರಬರಾಜು ಆಗುತ್ತಿವೆ. ಮಂಗಳೂರಿಗೆ ರಾಜ್ಯ ಮತ್ತು ದೇಶದ ನಾನಾ ಊರುಗಳಿಂದ ಸರಕು ಸಾಗಣೆಯ ವಾಹನಗಳು ಬರುತ್ತಿವೆ.
ಮಂಗಳೂರಿಗೆ ಬರುವ ಲಾರಿ/ಟ್ರಕ್ಗಳು ಸರಕುಗಳನ್ನು ಖಾಲಿ ಮಾಡಿದ ಬಳಿಕ ಮುಂದಿನ ಲೋಡ್ಗಾಗಿ ಕಾಯಬೇಕಾಗುತ್ತದೆ. ಲಾರಿ/ಟ್ಯಾಂಕರ್ಗಳಿಗೆ ಗ್ಯಾಸ್, ಪೆಟ್ರೋಲ್, ಡೀಸೆಲ್ ತುಂಬಿಸಲು ಸಮಯವೂ ಬೇಕಾಗುತ್ತದೆ. ಈ ವೇಳೆ ಲಾರಿ/ಟ್ರಕ್ಗಳನ್ನು ಒಂದೆಡೆ ನಿಲ್ಲಿಸುವುದು ಅನಿವಾರ್ಯವಾಗಿದೆ. ಕೆಲವೊಮ್ಮೆ 4-5 ದಿನಗಳ ಕಾಲ ಲೋಡ್ಗಾಗಿ ಲಾರಿ/ಟ್ರಕ್ಗಳು ಕಾಯಬೇಕಾಗುತ್ತದೆ. ಆದರೆ ಮಂಗಳೂರು ನಗರ ಅಥವಾ ಹೊರವಲಯದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಗಳಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದೆ. ಹೆದ್ದಾರಿ ಬದಿಗಳಲ್ಲಿ ಟ್ರಕ್/ಲಾರಿಗಳು ಸಾಲು ಸಾಲಾಗಿ ನಿಲ್ಲಿಸುವುದರಿಂದ ಕೆಲವೊಮ್ಮೆ ಅಪಘಾತಗಳಿಗೂ ಇದು ಕಾರಣವಾಗುತ್ತದೆ. ಸುಗಮ ಸಂಚಾರಕ್ಕೂ ಅಡ್ಡಿಯಾಗುತ್ತಿವೆ. ಹಾಗಾಗಿ ಲಾರಿ/ಟ್ರಕ್ಗಳ ನಿಲುಗಡೆಗೆ ವಿಶಾಲ ಮತ್ತು ಸುಸಜ್ಜಿತವಾದ ಟ್ರಕ್ ಟರ್ಮಿನಲ್ ಅಗತ್ಯವಿದೆ.
► ಎಚ್ಪಿಸಿಎಲ್ ಹಾಗೂ ನವಮಂಗಳೂರು ಬಂದರು ಯಾರ್ಡ್ನಲ್ಲಿ ಎರಡು ಟ್ರಕ್ ಟರ್ಮಿನಲ್ಗಳಿವೆ. ಆದರೆ ಅದು ಆ ಕಂಪೆನಿಗೆ ಸೀಮಿತವಾಗಿದೆ. ಈ ನಿಟ್ಟಿನಲ್ಲಿ 2003ರಲ್ಲಿ ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಅಂದರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಕುಳಾಯಿಯ 35 ಎಕರೆ ಜಾಗದಲ್ಲಿ ಸುಮಾರು 14 ಕೋ.ರೂ. ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸುವ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆ ಬಳಿಕ ಅದು ಕಾರ್ಯಗತಗೊಳ್ಳಲೇ ಇಲ್ಲ.
► ಹೆದ್ದಾರಿ ಬಳಿ ವಾಹನ ನಿಲ್ಲಿಸಿದರೂ ಹಗಲು ವೇಳೆ ಸಂಭಾವ್ಯ ಅಪಾಯ ತಪ್ಪಿಸಬಹುದು. ಆದರೆ ರಾತ್ರಿ ವೇಳೆ ಸ್ವಲ್ಪ ನಿಯಂತ್ರಣ ಕಳೆದುಕೊಂಡರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಮುಂದಾಗಬೇಕು ಎಂದು ಲಾರಿ/ಟ್ರಕ್ ಚಾಲಕರು ಆಗ್ರಹಿಸಿದ್ದಾರೆ.
ಲಾರಿ/ಟ್ರಕ್ಗಳಿಗೆ ಮೂಲ ಸೌಕರ್ಯ ಕಲ್ಪಿಸವ ಸಲುವಾಗಿ ಸ್ಥಾಪನೆಯಾಗಿರುವ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆಯು ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಅಧಿಕಾರಿಗಳ ಸಮ್ಮುಖ ದ.ಕ. ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸುಮಾರು 15 ಎಕರೆ ಜಮೀನು ಗುರುತಿಸುವಂತೆ ತಿಳಿಸಿತ್ತು. ಬಳಿಕ ಎನ್ಎಂಪಿಎ, ಬೈಕಂಪಾಡಿ ಸಮೀಪ ಗುರುತಿಸಿದ್ದ ಒಂಭತ್ತು ಎಕರೆ ಜಮೀನನ್ನು ಟ್ರಕ್ ಟರ್ಮಿನಲ್ ಕಂಪೆನಿಗೆ ಹಸ್ತಾಂತರಿಸಿಕೊಳ್ಳಲು ನಿರ್ದೇಶನ ನೀಡುವಂತೆ ಜಿಲ್ಲಾಡಳಿತಕ್ಕೆ 2022ರ ಆಗಸ್ಟ್ನಲ್ಲಿ ಪತ್ರ ಬರೆದಿತ್ತು. ಅಲ್ಲದೆ 2022ರ ಡಿಸೆಂಬರ್ನಲ್ಲಿ ಜಿಲ್ಲಾಡಳಿತಕ್ಕೆ ಮತ್ತೊಮ್ಮೆ ಪತ್ರ ಬರೆದಿತ್ತು. ಅಲ್ಲದೆ ಟರ್ಮಿನಲ್ ನಿರ್ಮಾಣಕ್ಕೆ ಹೆದ್ದಾರಿ ಪಕ್ಕದಲ್ಲೇ ಸರಕಾರಿ ಜಮೀನು ನೀಡುವಂತೆ ವಿನಂತಿಸಿತ್ತು. ಆದರೆ ಅದಿನ್ನೂ ಕಾರ್ಯಗತಗೊಂಡಿಲ್ಲ.







