ಮಂಗಳೂರು| ವಿಚಾರಣಾಧೀನ ಕೈದಿಗಳಿಂದ ಜೈಲಿನೊಳಗೆ ಡ್ರಗ್ಸ್ ಸಾಗಾಟಕ್ಕೆ ಯತ್ನ: ಪ್ರಕರಣ ದಾಖಲು

ಫೈಲ್ ಫೋಟೊ
ಮಂಗಳೂರು, ಆ.13: ನಗರದ ಜಿಲ್ಲಾ ಕಾರಾಗೃಹದೊಳಗೆ ಮಂಗಳವಾರ ಎಂಡಿಎಂಎ ಡ್ರಗ್ಸ್ ಸಾಗಾಟ ಮಾಡಲು ಯತ್ನಿಸಿರುವ ಇಬ್ಬರು ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ವಿಕ್ರಂ ಕುಮಾರ ಮತ್ತು ಪ್ರಮೋದ್ರನ್ನು ಮಂಗಳವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಜೈಲಿನ ಮುಖ್ಯ ದ್ವಾರದಲ್ಲಿ ಕೆಎಸ್ಐಎಸ್ಎಫ್ ಸಿಬ್ಬಂದಿಯು ಕೈದಿಗಳನ್ನು ತಪಾಸಣೆ ನಡೆಸಿದರು. ಆವಾಗ ವಿಕ್ರಂ ಕುಮಾರ್ ಧರಿಸಿದ್ದ ಚಪ್ಪಲಿಯಲ್ಲಿ ಹಳದಿ ಬಣ್ಣದ ಗಮ್ಟೇಪ್ನಿಂದ ಸುತ್ತಿದ ಎರಡು ಅನುಮಾನಸ್ಪದ ಪೊಟ್ಟಣಗಳು ಕಂಡುಬಂದವು. ಈ ಬಗ್ಗೆ ವಿಚಾರಣೆ ನಡೆಸಿದಾಗ ತಾನು ಧರಿಸಿದ್ದ ಚಪ್ಪಲಿ ಸಹ ಕೈದಿ ಪ್ರಮೋದನಿಗೆ ಸೇರಿದ್ದಾಗಿದೆ. ನ್ಯಾಯಾಲಯದಿಂದ ಕಾರಾಗೃಹಕ್ಕೆ ವಾಪಸ್ಸಾಗುವಾಗ ಬದಲಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದ. ಅದರಂತೆ ಪ್ರಮೋದ್ನನ್ನು ವಿಚಾರಿಸಿದಾಗ ನ್ಯಾಯಾಲಯದ ವಿಚಾರಣೆಗೆ ಹೋಗುವಾಗ ಹಿಂದೆ ತನ್ನೊಂದಿಗೆ ಕೇಸೊಂದರ ಲ್ಲಿದ್ದ ದಾವಣಗೆರೆಯ ಮಂಜುನಾಥನು ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯದ ಬಕೆಟ್ನ ತಳಭಾಗದಲ್ಲಿ 2 ಪೊಟ್ಟಣ ಬಚ್ಚಿಟ್ಟಿರುವುದಾಗಿ ತಿಳಿಸಿದ್ದ. ಅದರಂತೆ ಅವುಗಳನ್ನು ತೆಗೆದು ಚಪ್ಪಲಿಯಲ್ಲಿಟ್ಟುಕೊಂಡು ಬಂದಿದ್ದೆ. ಜೈಲು ಪ್ರವೇಶಿಸುವಾಗ ಚಪ್ಪಲಿ ಬದಲಿಸಿಕೊಂಡಿದ್ದೆವು ಎಂದು ತಿಳಿಸಿದ್ದಾನೆ.
10 ಪೊಟ್ಟಣಗಳು ಪತ್ತೆ: ಗಮ್ಟೇಪ್ನಿಂದ ಸುತ್ತಿದ 2 ಪೊಟ್ಟಣಗಳನ್ನು ಪರಿಶೀಲಿಸಿದಾಗ ಸಣ್ಣ ಸಣ್ಣ ಬಿಳಿ ಬಣ್ಣದ 10 ಪೊಟ್ಟಣಗಳಿದ್ದವು. ಅದರಲ್ಲಿ ಎಂಡಿಎಂಎ ಡ್ರಗ್ಸ್ ಕಂಡುಬಂದಿದೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.





