ಮಂಗಳೂರು | ವಕ್ಫ್ ಕಾಯಿದೆ ವಿರೋಧಿ ಹೋರಾಟಕ್ಕೆ ಜನಪ್ರತಿನಿಧಿಗಳ ಒಕ್ಕೂಟ ಬೆಂಬಲ

ಮಂಗಳೂರು : ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುವ ಪ್ರತಿಭಟನೆಗೆ ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಸಂಪೂರ್ಣ ಬೆಂಬಲ ನೀಡಿ, ಕಾಯಿದೆ ಬಗ್ಗೆ ಮುಸ್ಲಿಮೇತರರ ಮಧ್ಯೆ ಇರುವ ಗೊಂದಲ ನಿವಾರಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜಪೆ ಹೇಳಿದರು.
ಕಾಯಿದೆ ವಿರುದ್ಧ ಎ.18ರಂದು ಉಲಮಾಗಳ ಪ್ರತಿಭಟನೆ ಮತ್ತು ಎ.29ರ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರತಿಭಟನೆಗೆ ಜಿಲ್ಲೆಯ ಎಲ್ಲ ಮುಸ್ಲಿಂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ತಿಳಿಸಿದರು.
ವಕ್ಫ್ ಆಸ್ತಿ ಮತ್ತು ವಕ್ಫ್ ಮಂಡಳಿ ಬಗ್ಗೆ ಸಾರ್ವಜನಿಕವಾಗಿ ಹಲವಾರು ಸುಳ್ಳು ಸುದ್ದಿಗಳನ್ನು ಹರಡಿಸಲಾಗಿದೆ. ವಕ್ಫ್ ಭೂಮಿ ಅಂತ ಒಂದು ಜಾಗದಲ್ಲಿ ನಿಂತು ಹೇಳಿದಾಕ್ಷಣ ಅದು ವಕ್ಫ್ ಆಗುತ್ತದೆ ಎಂದೂ, ವಕ್ಫ್ ಮಂಡಳಿ ಹಿಂದೂಗಳ ಭೂಮಿ ಕಬಳಿಸಿ ಮುಸ್ಲಿಮರಿಗೆ ಖಾತೆ ಮಾಡಿಸುವ ಸಂಸ್ಥೆ ಎಂದು ಸುಳ್ಳು ಸುದ್ದಿ ಹರಡಿಸುವ ವಿರುದ್ಧ ಜನರಿಗೆ ಸತ್ಯ ಮನವರಿಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಮುಸ್ಲಿಮರ ಹಕ್ಕುಗಳನ್ನು ಹತ್ತಿಕ್ಕುವ ಜೊತೆಗೆ, ಬಂಡವಾಳಶಾಹಿಗಳ ಅಧೀನದಲ್ಲಿರುವ ಜಮೀನು ರಕ್ಷಣೆ ಮಾಡುವ ಉದ್ದೇಶಕ್ಕಾಗಿ ಮೋದಿ ಸರಕಾರ ಕಾಯಿದೆ ಜಾರಿಗೆ ತಂದಿರುವುದು ಕಳವಳಕಾರಿ ಎಂದರು.
ಧರ್ಮದ ಆಧಾರದ ಮೇಲೆ ಈ ದೇಶದಲ್ಲಿ ಸೌಹಾರ್ದತೆ ಇರುವ ಹಿಂದೂ- ಮುಸ್ಲಿಮರನ್ನು ಎತ್ತಿಕಟ್ಟಿ ಅಧಿಕಾರ ಲಾಭ ಪಡೆಯುವ ಬಿಜೆಪಿ ಸರಕಾರದ ಬಣ್ಣ ಕೆಲವೇ ದಿನಗಳಲ್ಲಿ ಬಯಲಾಗಲಿದೆ. ದೇಶದ ಎಲ್ಲ ಜಾತ್ಯತೀತ ಪಕ್ಷಗಳು ವಕ್ಫ್ ಮಸೂದೆ ಖಂಡಿಸಿರುವುದಕ್ಕೆ ನಾವು ಅಭಿನಂದಿಸುತ್ತೇವೆ ಎಂದು ಅವರು ಹೇಳಿದರು.
ಕೆಲವು ನಕಲಿ ಜಾತ್ಯತೀತ ಪಕ್ಷಗಳು ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಪಡೆದು, ತನ್ನ ಅಧಿಕಾರದ ಆಸೆಗಾಗಿ ಜಾತ್ಯತೀತ ತತ್ವವನ್ನು ಹಣ ಮತ್ತು ಅಧಿಕಾರದ ಆಸೆಗಾಗಿ ಕೋಮು ಪಕ್ಷದೊಂದಿಗೆ ಸೇರಿಕೊಂಡಿರುವುದನ್ನು ಖಂಡಿಸುವ ಜೊತೆಗೆ, ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಈ ದೇಶದ ಮತದಾರರು ಕಲಿಸಲಿದ್ದಾರೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಜಿಪ, ಸದಸ್ಯರಾದ ಅಬ್ದುಲ್ ಸಲಾಂ ಸೋಮೇಶ್ವರ, ಎ.ಕೆ ಅಬ್ದುಲ್ ಸತ್ತಾರ್, ಅಬ್ದುಲ್ ರಝಾಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.