ಮಂಗಳೂರು ವಿವಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆ

ಕೊಣಾಜೆ : ಇಂದಿನ ಆಧುನಿಕತೆ, ತಂತ್ರಜ್ಞಾನಗಳ ನಡುವೆ ವಿದ್ಯಾರ್ಥಿಗಳು ಕಳೆದುಹೋಗದೆ ಉತ್ತಮ ಶಿಕ್ಷಣ, ತಂತ್ರಜ್ಞಾನವನ್ನು ಸಕಾರತ್ಮವಾಗಿ ಬಳಸಿಕೊಂಡು ದೇಶಕ್ಕೆ ಕೊಡುಗೆಯಾಗಬೇಕು ಜೊತೆಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಆಸ್ತಿಗಳಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಹೇಳಿದರು.
ಮಂಗಳೂರು ವಿವಿಯಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಒಂದೆಡೆ ತಂತ್ರಜ್ಞಾನ ಮುನ್ನಡೆಯುತ್ತಿದ್ದರೂ ಯುವ ಸಮುದಾಯ ಯಾವ ಕಡೆ ಹೋಗ್ತಾ ಇದೆ ಎಂಬುದು ಅರ್ಥವಾಗುತ್ತಿಲ್ಲ. ತಂತ್ರಜ್ಞಾನ ಯುಗದಲ್ಲಿ ಯುವಕರು ಏನು ಆಗಬೇಕೋ ಅದಾಗದೆ, ಎನಾಗಬಾರದೋ ಅದಾಗುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಸಾಧನೆ ಕೇವಲ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳಿಂದಲ್ಲ, ಜೀವನದ ಅಂಕಗಳನ್ನು ಗಳಿಸುವುದು ಮುಖ್ಯ. ಅದಕ್ಕಾಗಿ ಶಿಕ್ಷಕರು ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ. ವಿವಿಗಳು ಕೇವಲ ಪದವಿ ನೀಡುವ ಕೇಂದ್ರಗಳಾಗದೆ ಉತ್ತಮ ಶಿಕ್ಷಣ, ವ್ಯಕ್ತಿತ್ವದೊಂದಿಗೆ ಉತ್ತಮ ಪ್ರಜೆಯನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ.ಅಂಬೇಡ್ಕರ್ ಅವರಿಗೆ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಯ ಬಗ್ಗೆ ಅರಿವಿದ್ದ ಕಾರಣ ಬಹಳ ದೂರದೃಷ್ಟಿಯ ಸಂವಿಧಾನವನ್ನು ರಚಿಸಲು ಕಾರಣವಾಯಿತು. ಇದು ಬೇರೆ ಬೇರೆ ದೇಶಗಳ ಸಂವಿಧಾನಕ್ಕಿಂತ ವಿಭಿನ್ನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ, ಸಂಯೋಜಕರಾದ ಡಾ.ಜೆರಾಲ್ಡ್ ಸಂತೋಷ್ ಉಪಸ್ಥಿತರಿದ್ದರು.
ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವರಾದ ದೇವೇಂದ್ರಪ್ಪ ಅವರು ವಂದಿಸಿದರು. ಡಾ.ಪ್ರಸನ್ನ ಅವರು ಕಾರ್ಯಕ್ರಮ ನಿರೂಪಿಸಿದರು.







