Mangaluru | ಯುವಕ ಆತ್ಮಹತ್ಯೆ

ಮಂಗಳೂರು, ಡಿ.13: ನಗರದ ಪಡೀಲ್ ನ ಕೊಡಕ್ಕಲ್ದ ಮನೆಯೊಂದರ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಶನಿವಾರ ನಡೆದಿದೆ.
ಶ್ರವಣ್ರಾಜ್ ಕಂಬಳಿ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರವಣ್ರಾಜ್ ಶುಕ್ರವಾರ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು ಎನ್ನಲಾಗಿದೆ. ಸಂಜೆ ವೇಳೆ ಮನೆಯಿಂದ ಹೊರಗೆ ಹೋಗಿದ್ದು, ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಸ್ನೇಹಿತರೊಂದಿಗೆ ಇರಬಹುದು ಎಂದು ಮನೆ ಮಂದಿ ಭಾವಿಸಿದ್ದರು. ಆದರೆ ಬೆಳಗ್ಗೆಯಾದರೂ ಬಾರದ ಕಾರಣ ಹುಡುಕಾಟ ನಡೆಸಿದಾಗ ಮನೆಯ ಪಕ್ಕದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಂಕನಾಡಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಆತ್ಮಹತ್ಯೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಮೂವರು ಪುತ್ರರಲ್ಲಿ ಕಿರಿಯವನಾಗಿದ್ದು, ಅಕ್ಕನಿಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು. ಅಣ್ಣ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







