ವಿಟ್ಲ: ಮಾರ್ಬಲ್ ಸಾಗಾಟದ ಲಾರಿ ಪಲ್ಟಿ; ಓರ್ವ ಮೃತ್ಯು, ಮೂವರು ಗಂಭೀರ

ವಿಟ್ಲ: ಮಾರ್ಬಲ್ ತುಂಬಿಕೊಂಡು ಬಂದ ಲಾರಿ ಇಳಿಜಾರು ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡು ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಲಾರಿಯಲ್ಲಿದ್ದ ಓರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಬುಧವಾರ ಕರೋಪಾಡಿ ಗ್ರಾಮದ ಒಡಿಯೂರಿನಲ್ಲಿ ನಡೆದಿದೆ.
ಬಿಹಾರ ಮೂಲದ ಶುಭಾಚಂದ್ರ ಘಟವಾರ್ (60) ಮೃತಪಟ್ಟಿದ್ದಾರೆ. ಬಿಹಾರ ಮೂಲದ ಪವನ್ (30), ಕಲ್ಲಡ್ಕ ನಿವಾಸಿ ಆದಂ (55), ಅವರ ಪುತ್ರ ಹರ್ಷದ್ (22) ಗಂಭೀರ ಗಾಯಗೊಂಡು ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಗ್ಗೆ ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಿಂದ ಶಾಲೆಯ ಕಟ್ಟಡಕ್ಕೆ ಹಾಸಲು ಮಾರ್ಬಲ್ ಹೇರಿಕೊಂಡು ಬಂದ ಲಾರಿ ಶಾಲೆಯ ಸಮೀಪ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಕಡಿದಾದ ಇಳಿಜಾರು ಪ್ರದೇಶದಲ್ಲಿ ವೇಗದಿಂದ ಸಾಗಿದೆ. ಲಾರಿ ಕೆಳ ಭಾಗದಲ್ಲಿದ್ದ ಕಟ್ಟಡಕ್ಕೆ ಢಿಕ್ಕಿ ಹೊಡೆಯುವ ಸಂದರ್ಭ ಲಾರಿಯಲ್ಲಿದ್ದವರು ಹೊರಗೆ ಎಸೆಯಲ್ಪಟ್ಟಿದ್ದಾರೆನ್ನಲಾಗಿದೆ.
ಲಾರಿಯ ಢಿಕ್ಕಿಯ ವೇಗಕ್ಕೆ ಗೋಡೆ ಹಾನಿಗೊಂಡಿದ್ದು, ಹಿಂಭಾಗದಲ್ಲಿದ್ದ ಮಾರ್ಬಲ್ ಮುಂಭಾಗಕ್ಕೆ ನುಗ್ಗಿ ಚಾಲಕನ ಕ್ಯಾಬಿನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಿಂದ ಲಾರಿಯಲ್ಲಿದ್ದವರಲ್ಲಿ ಓರ್ವನಿಗೆ ಸೊಂಟಕ್ಕೆ ಹಾನಿಯಾಗಿ ಉಳಿದವರಿಗೆ ಕೈಕಾಲುಗಳಿಗೆ ತೀವ್ರ ತರದ ಗಾಯವಾಗಿದೆ.







