ದ.ಕ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ: ನಂತೂರ್ ನಲ್ಲಿ ಸಾಮೂಹಿಕ ಧರಣಿ ಆರಂಭ

ಮಂಗಳೂರು: ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಬೇಕು, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸಬೇಕು, ಹೊಸ ಟೋಲ್ ಗೇಟ್ ಗಳನ್ನು ಅಳವಡಿಸುವ ಸಂದರ್ಭ ಅಂತರದ ನಿಯಮಗಳನ್ನು ಪಾಲಿಸಬೇಕು, ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಬುಧವಾರ ಬೆಳಗ್ಗೆ ನಂತೂರು ಜಂಕ್ಷನ್ ಸಮೀಪ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಾಮೂಹಿಕ ಧರಣಿ ಆರಂಭಗೊಂಡಿತು.
ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕಮುನೀರ್ ಕಾಟಿಪಳ್ಳ ಧರಣಿಯನ್ನು ಉದ್ಘಾಟಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೇಲ್ದರ್ಜೆಗೆ ಏರುತ್ತಿರುವ ಬಿ.ಸಿ.ರೋಡ್ - ಗುಂಡ್ಯ, ಪೂಂಜಾಲಕಟ್ಟೆ - ಚಾರ್ಮಾಡಿ, ನಂತೂರು - ಮೂಡುಬಿದಿರೆ - ಕಾರ್ಕಳ ಹೆದ್ದಾರಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು, ಸಂಪೂರ್ಣ ಹದಗೆಟ್ಟಿರುವ ಸುರತ್ಕಲ್ - ನಂತೂರು ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು, ಸ್ಥಗಿತಗೊಂಡಿರುವ ನಂತೂರು ಮೇಲ್ಸೇತುವೆ, ಕೂಳೂರು ನೂತನ ಸೇತುವೆ ಕಾಮಗಾರಿಗಳನ್ನು ಆದ್ಯತೆಯಲ್ಲಿ ನಡೆಸಿ ಕಾಲಮಿತಿಯ ಒಳಗಡೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಸ್ಯೆಗಳು ಬಗೆ ಹರಿಯುವವರಗೆ ಹಲವು ಹಂತಗಳಲ್ಲಿ ಹೋರಾಟ ಮುಂದುವರಿಯಲಿದೆ .ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಚಿವರು ತಕ್ಷಣ ಇಲ್ಲಿ ನ ಸಮಸ್ಯೆ ಕಡೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಚಿಂತಕ ಎಂ.ಜಿ.ಹೆಗಡೆ, ಸಿಪಿಐ ಜಿಲ್ಲಾ ಮುಖಂಡ ಶೇಖರ್ ಬಿ. ಮಾತನಾಡಿ ಸಮಸ್ಯೆ ಪರಿಹಾರಕ್ಕೆಸರಕಾರವನ್ನು ಆಗ್ರಹಿಸಿದರು.
ಜಿಲ್ಲೆಯ ವಿವಿಧ ಜನಪರ ಸಂಘಟನೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರುಗಳು ಧರಣಿಯಲ್ಲಿ ಭಾಗವಹಿಸಿದ್ದಾರೆ.