ದಶಕಗಳಿಂದ ಧರ್ಮಸ್ಥಳದಲ್ಲಿ ನಡೆದ ಕೊಲೆ ಪ್ರಕರಣಗಳ ತನಿಖೆ ನಡೆಸುವಂತೆ ಎಸ್ಐಟಿಗೆ ದೂರು: ಮಟ್ಟಣ್ಣನವರ್

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ದಶಕಗಳಿಂದ ಹಲವು ಕೊಲೆ ಪ್ರಕರಣಗಳು ನಡೆದಿವೆ. ಆದರೆ ಈ ಯಾವುದೇ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿಲ್ಲ. ಈ ಎಲ್ಲ ಪ್ರಕರಣಗಳನ್ನು ಎಸ್ಐಟಿ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಎಸ್ಐಟಿಗೆ ದೂರು ನೀಡಿರುವುದಾಗಿ ಸೌಜನ್ಯಾ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.
ಎಸ್ಐಟಿ ಕಚೇರಿಗೆ ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಇತರರೊಂದಿಗೆ ತೆರಳಿ ದೂರು ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ವೇದವಲ್ಲಿ, ಪದ್ಮಲತಾ, ಆನೆ ಮಾವುತ ನಾರಾಯಣ, ಯಮುನಾ, ಸೌಜನ್ಯಾ ಪ್ರಕರಣಗಳು ಇದರಲ್ಲಿ ಪ್ರಮುಖವಾಗಿದೆ. ಈ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳು ಪತ್ತೆಯಾಗಲೇ ಇಲ್ಲ. ಇದಲ್ಲದೆ ಇಲ್ಲಿ ಹಲವಾರು ಕೊಲೆ, ಅಸಹಜ ಸಾವು ಪ್ರಕರಣಗಳು ಇಲ್ಲಿ ದಾಖಲಾಗಿದೆ. ಇನ್ನೂ ಹಲವು ಪ್ರಕರಣಗಳು ದಾಖಲಾಗಿಯೇ ಇಲ್ಲ. ಆದರೆ ಈ ಯಾವ ಪ್ರಕರಣಗಳಲ್ಲಿಯೂ ಆರೋಪಿಗಳು ಪತ್ತೆಯಾಗಿಲ್ಲ. ಇದಕ್ಕೆ ಒಂದು ಅಂತ್ಯ ಬೇಕಾಗಿದೆ ಎಂದರು.
ಈ ಎಲ್ಲ ಪ್ರಕರಣಗಳ ಬಗ್ಗೆ ಪೂರ್ಣ ದಾಖಲೆಗಳೊಂದಿಗೆ ಎಸ್ಐಟಿಗೆ ದೂರು ನೀಡಿದ್ದೇವೆ. ಈ ಎಲ್ಲ ಪ್ರಕರಣಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಹೊರತರಬೇಕು. ಈ ದೂರಿನ ಪ್ರತಿಯನ್ನು ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶ, ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಕಳುಹಿಸಲಾಗಿದೆ. ಈ ಕೊಲೆಗಳಿಗೆ ಅಸಹಜ ಸಾವುಗಳಿಗೆ ಒಂದು ತಾರ್ಕಿಕ ಅಂತ್ಯ ಸಿಗಬೇಕಾಗಿದೆ. ಅದಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಚಿನ್ನಯ್ಯನ ಹಿಂದಿರುವ ಷಡ್ಯಂತ್ರದ ಬಗ್ಗೆ ತನಿಖೆಯಾಗಬೇಕು:
ಚಿನ್ನಯ್ಯ ಕಳೆದ ಎರಡು ವರ್ಷಗಳಿಂದ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಸತ್ಯ ಹೇಳುತ್ತಿದ್ದ ಅದನ್ನು ಆತ ಎಸ್ಪಿ ಮುಂದೆ, ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ, ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾನೆ. ತಾನು ಮೃತದೇಹಗಳನ್ನು ಹೂತು ಹಾಕಿದ ಸ್ಥಳವನ್ನು ತೋರಿಸಿ ಹೇಳಿಕೆ ನೀಡಿದ್ದಾನೆ. ಇದೆಲ್ಲ ಆದ ಬಳಿಕ ಆತ ಏಕಾಏಕಿ ತಾನು ಹೇಳಿರುವುದು ಸುಳ್ಳು ಎಂದು ಹೇಳಿಕೆ ನೀಡಿದ್ದರೆ ಅದರ ಹಿಂದಿರುವ ಷಡ್ಯಂತ್ರದ ಬಗ್ಗೆ ತನಿಖೆ ನಡೆಯಬೇಕಾಗಿದೆ. ಆತ ಈ ಹೇಳಿಕೆ ನೀಡಲು ಕಾರಣವೇನು? ಅದರ ಹಿಂದಿರುವವರು ಯಾರು ಎಂಬುದು ತನಿಖೆ ನಡೆದು ಸತ್ಯ ಹೊರ ಬರಬೇಕಾಗಿದೆ ಎಂದರು.
ಹೋರಾಟಗಾರರನ್ನು ಧಮನಿಸುವ ಯತ್ನ:
ಮಾನವಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ವ್ಯಕ್ತಿಯನ್ನು ಅಧಿಕಾರಿ ಅಂತ ಹೇಳಿದ ಕಾರಣಕ್ಕೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆ ಸಂದರ್ಭದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಆರೋಪಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆ ಯಾರದೋ ಕಾವಲುಗಾರರಂತೆ ಕೆಲಸ ಮಾಡುತ್ತಿದ್ದಾರೆ. ಹೋರಾಟಗಾರರನ್ನು ಹೇಗೆ ಧಮನಿಸಬಹುದು ಎಂದು ಇವರು ಪ್ರಯತ್ನಿಸುತ್ತಿದ್ದಾರೆ. ಹೋರಾಟವನ್ನು ಹತ್ತಿಕ್ಕಬೇಕು ಎಂಬುದೇ ಅವರ ಉದ್ದೇಶವಾಗಿದೆ. ಆದರೆ ಇದನ್ನು ಎದುರಿಸಲು ಹೋರಾಟಗಾರರು ಸದಾ ಸಿದ್ಧರಿದ್ದಾರೆ. ಅ.9ರಂದು ರಾಜ್ಯಾದ್ಯಂತ ನಡೆದ ಹೋರಾಟ ಇದಕ್ಕೆ ಸಾಕ್ಷಿ ಎಂದರು.
ತಿಮರೋಡಿ ತಲೆ ಮರೆಸಿಕೊಂಡಿಲ್ಲ:
ಸೌಜನ್ಯಾ ಪರ ಹೋರಾಟದ ನೇತೃತ್ವ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ, ಗಡಿಪಾರು ಮಾಡುವ ಪ್ರಯತ್ನ ನಡೆದಿದೆ. ಆದರೆ ಇದೆಲ್ಲವನ್ನೂ ಕಾನೂನು ಬದ್ಧವಾಗಿಯೇ ಎದುರಿಸುವ ಕಾರ್ಯ ಮಾಡುತ್ತೇವೆ. ಅವರು ಎಲ್ಲಿಯೂ ತಲೆಮರೆಸಿಕೊಂಡಿಲ್ಲ. ಅವರಲ್ಲಿ ಮಾತನಾಡಿಯೇ ಬಂದಿದ್ದೇನೆ. ನೋಟಿಸ್ಗಳಿಗೆ ಅವರು ಕಾನೂನು ಬದ್ಧವಾಗಿಯೇ ಉತ್ತರಿಸಿದ್ದಾರೆ ಎಂದು ತಿಳಿಸಿದರು.







