ಆಳ್ವಾಸ್ ವಿರಾಸತ್ 2023ರ ಪ್ರಯುಕ್ತ ಮಾಧ್ಯಮ ಕೇಂದ್ರ ಆರಂಭ

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಡಿ.14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಿ.14ರಂದು ಮೂಡುಬಿದಿರೆಯಲ್ಲಿ ಮಾಧ್ಯಮ ಕೇಂದ್ರ ವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಬುಧವಾರ ಉದ್ಘಾಟಿಸಿದರು. ಕಲೆ,ಸಂಸ್ಕೃತಿ ಜ್ಞಾನದ ವಿಸ್ತರಣೆಯ ಹಿನ್ನೆಲೆಯಲ್ಲಿ ನಡೆಸುತ್ತಾ ಬಂದಿರುವ ವಿರಾಸತ್ ಈ ಬಾರಿಯೂ ಈ ನಿಟ್ಟಿನಲ್ಲಿ ಸಾಗಲಿದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಐಎಫ್ ಎಸ್ ಅಧಿಕಾರಿ ಎಂ.ಎನ್. ಜಯಕುಮಾರ್ ಮಾತನಾಡುತ್ತಾ,ಪರಿಸರದ ವೈಪರೀತ್ಯ, ಹವಾಮಾನ ಬದಲಾವಣೆ ವನ್ಯಜೀವಿಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಬಗೆಗೆ ಗಮನ ಸೆಳೆಯುವ ನಿಟ್ಟಿನಲ್ಲಿ ವನ್ಯಜೀವಿ ಗಳ ಫೋಟೋ ಪ್ರದರ್ಶನ ಇರಲಿದೆ ಎಂದರು.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ವೀರಾಸತ್ ಗೆ ರಾಜ್ಯ ಪಾಲರಿಂದ ಚಾಲನೆ:
29ನೇ ವರ್ಷದ ‘ಆಳ್ವಾಸ್ ವಿರಾಸತ್ ಡಿ.14ರಂದು 5.45ಕ್ಕೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಉದ್ಘಾಟಿಸುವರು. ಡಾ. ವೀರೇಂದ್ರ ಹೆಗ್ಗಡೆ ಸಮಾರಂಭದ ಅಧ್ಯಕ್ಷ ತೆವಹಿಸಲಿದ್ದಾರೆ. ಸಂಜೆ 6:35ಕ್ಕೆ ಆಳ್ವಾಸ್ ವಿರಾಸತ್ನ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆ, ಬಳಿಕ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ. ಡಿ.15ರಂದು ಸಂಜೆ 6 ರಿಂದ 8ರ ವರೆಗೆ ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರಿಂದ ‘ಗಾನ ವೈಭವ’ ಇರಲಿದೆ.ಡಿ. 16ರಂದು ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ‘ಭಾವ ಲಹರಿ’ ನಡೆಯಲಿದೆ. ಎರಡೂ ದಿನಗಳೂ ಸಂಜೆ 5:45ಕ್ಕೆ ದ್ವೀಪ ಪ್ರಜ್ವಲನ ಹಾಗೂ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ಇರಲಿದೆ ಎ೦ದವರು ತಿಳಿಸಿದರು..
ಡಿ.17ರಂದು ಸಂಜೆ 5:15ರಂದು ಆಳ್ವಾಸ್ ವಿರಾಸತ್-2023 ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಬಾರಿ ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಕಿಂಡಿ ಹಾಗೂ ವಿಜಯ ಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು.
ಬಳಿಕ ಸಂಜೆ 6:30ಕ್ಕೆ ಡಾ. ಮೈಸೂರು ಮಂಜುನಾಥ್ ಮತ್ತು ಡಾ.ಪ್ರವೀಣ್ ಗೋಡ್ಕಿಂಡಿ ಮತ್ತು ವಿಜಯ ಪ್ರಕಾಶ್ ಅವರಿಂದ ‘ತಾಳ-ವಾದ್ಯ- ಸಂಗೀತ’ ನಡೆಯಲಿದೆ. ರಾತ್ರಿ 7:30ಕ್ಕೆ ಚಲನಚಿತ್ರ ಖ್ಯಾತ ಹಿನ್ನೆಲೆಗಾಯಕ ವಿಜಯಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. 9.30ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಇರಲಿದೆ.
ಈ ಬಾರಿಯ ಆಳ್ವಾಸ್ ವಿರಾಸತ್ನಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ಅನ್ವೇಷಣಾತ್ಮಕ ಕೃಷಿಕ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವು ವಿಶೇಷ ಆಕರ್ಷಣೆಯಾಗಿದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.







