ಮೆಲ್ಕಾರ್ ಮಹಿಳಾ ಕಾಲೇಜಿನ 17ನೇ ವಾರ್ಷಿಕೋತ್ಸವ, ಪದವಿ ಪ್ರದಾನ ಕಾರ್ಯಕ್ರಮ

ಬಂಟ್ವಾಳ: ಪದವಿ ಎನ್ನುವ ಮೈಲುಗಲ್ಲು ಅಂತ್ಯವಲ್ಲ ಇದು ಒಂದು ಉಡಾವಣೆ ವೇದಿಕೆ. ಜೀವನವು ಹೊಸ ಪಾಠಗಳು, ಹೊಸ ಸವಾಲುಗಳು ಮತ್ತು ಹೊಸ ಸಂತೋಷಗಳನ್ನು ನೀಡುತ್ತದೆ. ನೀವು ಯಾವಾಗಲೂ ಕುತೂಹಲದಿಂದಿರಿ, ಧೈರ್ಯಶಾಲಿಯಾಗಿರಿ ಮತ್ತು ದಯೆಯಿಂದಿರಿ ಎಂದು ಎ.ಎಂ. ಸ್ಟುಡಿಯೋ ಸಂಸ್ಥೆಯ ಆರ್ಕಿಟೆಕ್ಟ್ ಆಸಿಫ್ ಮುಹಮ್ಮದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಅವರು ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪದವಿ ಪೂರ್ವ ತರಗತಿಗಳಲ್ಲಿ 90 ಶೇಕಡಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ದಾಖಲಾತಿ ಪಡೆದರೆ ಶೇಕಡ 50ರಷ್ಟು ಶುಲ್ಕವನ್ನು ತಾವು ಪಾವತಿಸುವುದಾಗಿ ಗಡಿಯಾರ ಗ್ರೂಪ್ ಆಫ್ ಕಂಪೆನೀಸ್ ಮಾಲಕ ಇಬ್ರಾಹೀಂ ಗಡಿಯಾರ ಈ ಸಂದರ್ಭದಲ್ಲಿ ಘೋಷಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ, ಪದವಿ ಪ್ರದಾನ ಮಾಡಿದ ಕಾಲೇಜು ಸಂಸ್ಥಾಪಕ ಎಸ್.ಎಂ.ರಶೀದ್ ಹಾಜಿ ಮಾತನಾಡಿ, ಜಗತ್ತಿಗೆ ನಿಮ್ಮ ವಿಶಿಷ್ಟ ಪ್ರತಿಭೆಗಳು, ನಿಮ್ಮ ಹೊಸ ದೃಷ್ಟಿಕೋನಗಳು ಮತ್ತು ನಿಮ್ಮ ಸಹಾನುಭೂತಿಯ ಹೃದಯಗಳು ಬೇಕಾಗಿವೆ. ಮತ್ತು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದಿರಿ, ನಮ್ಮ ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.
ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸಿರ್, ನಿರ್ದೇಶಕ ನಿಸಾರ್ ಫಕೀರ್ ಮುಹಮ್ಮದ್, ಅಲ್ ಬದ್ರಿಯಾ ಎಜುಕೇಶನಲ್ ಅಸೋಸಿಯೇಶನ್ ಸಂಚಾಲಕ ಬಿ.ಎ.ನಝೀರ್ ಮಾತನಾಡಿ ಶುಭ ಹಾರೈಸಿದರು.
ಬಂಟ್ವಾಳ ಸಂಚಾರ ಪೊಲೀಸ್ ಠಾಣಾಧಿಕಾರಿ ಸುತೇಶ್ ಕೆ.ಪಿ., ದಾರುಲ್ ಇಸ್ಲಾಮ್ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಹಮೀದ್ ಕೆ. ಮಾಣಿ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲ ಅಬ್ದುಲ್ ಮಜೀದ್ . ವಾರ್ಷಿಕ ವರದಿ ವಾಚಿಸಿದರು.
ವಿದ್ಯಾರ್ಥಿನಿಯರಾದ ಪಾತಿಮಾ ನಿದಾ ಸ್ವಾಗತಿಸಿದರು, ಕೆ.ಪಿ.ಆಯಿಶತ್ ಸುಹಾನ ವಂದಿಸಿದರು . ಉಪ ಪ್ರಾಂಶುಪಾಲೆ ಅಂಜಲಿನಾ ಸುನೀತಾ ಪಿರೇರ ಹಾಗೂ ಮಶ್ಮೂಮ್ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.







