ಕೆಂಪು ಕಲ್ಲು ದರ ನಿಯಂತ್ರಣಕ್ಕೆ ಶಾಸಕರ ಒತ್ತಾಯ

ಮಂಗಳೂರು, ನ.11: ಕೆಂಪುಕಲ್ಲಿನ ಗಣಿಗಾರಿಕೆ ಮೇಲಿನ ರಾಜಧನ ಇಳಿಕೆಯಾಗಿದ್ದರೂ ಕೆಂಪು ಕಲ್ಲು ದರ ಮಾತ್ರ ದುಬಾರಿಯಾಗಿರುವ ಕಾರಣ ದ.ಕ. ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿಲ್ಲ. ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲೆಯ ಶಾಸಕರು ಆಗ್ರಹಿಸಿದ್ದಾರೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರಳ್ಯ ಕೆಂಪು ಕಲ್ಲಿನ ದರ ದುಬಾರಿಯಾಗಿರುವ ಬಗ್ಗೆ ಆಕ್ಷೇಪಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ವಿಷಯ ಪ್ರಸ್ತಾಪಿಸಿ, ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರಿಗೆ ರಾಜಧನ ಹೆಚ್ಚಳವಾಗಿದೆ ಎಂಬ ಕಾರಣದಿಂದ ನಾವೆಲ್ಲಾ ಪ್ರಯತ್ನಿಸಿ ಸರಕಾರದ ಮೂಲಕ ಕಡಿಮೆ ಮಾಡಲಾಗಿದೆ. ಹಿಂದೆ 30 ರೂ.ಗಳಿಗೆ ಸಿಗುತ್ತಿದ್ದ ಕೆಂಪುಕಲ್ಲಿನ ದರ ಪ್ರಸಕ್ತ 55 ರೂ. ಆಗಿದೆ. ರಾಜಧನ ಕಡಿಮೆಯಾಗಿದ್ದರೂ ಕೆಂಪುಕಲ್ಲು ಪೂರೈಕೆದಾರರು ದರ ಇಳಿಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರು ಕೆಂಪು ಕಲ್ಲಿನ ದುಬಾರಿ ಬೆಲೆ ಹಾಗೂ ಮರಳಿನ ಸಮಸ್ಯೆಯಿಂದಾಗಿ ಮನೆ ಪೂರ್ಣಗೊಳಿಸಲು ಸಾಧ್ಯವಾಗದೆ ಗೃಹ ಪ್ರವೇಶ ಮಾಡಲಾಗದೆ ಸಂಕಷ್ಟ ಪಡುವಂತಾಗಿದೆ ಎಂದು ಹರೀಶ್ ಪೂಂಜ ಹೇಳಿದಾಗ ಇತರ ಶಾಸಕರು ಕೂಡಾ ದನಿಗೂಡಿಸಿದರು.
ಈ ಬಗ್ಗೆ ಈಗಾಗಲೇ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರ ಅಸೋಶಿಯೇಶನ್ ಜತೆ ಮಾತುಕತೆ ನಡೆಸಲಾಗಿದೆ. ರಾಜ್ಯದಲ್ಲಿ ರಾಜಧನ ದುಬಾರಿ ಇದೆ ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಟನ್‌ಗೆ 295 ರೂ.ಗಳಿದ್ದ ರಾಜಧನವನ್ನು 100 ರೂ.ಗಳಿಗೆ ಸೀಮಿತಗೊಳಿಸಲಾಗಿದೆ. ಹಾಗಿದ್ದರೂ ದರ ಇಳಿಕೆಗೆ ಮುಂದಾಗದಿರುವುದು ಗಮನಕ್ಕೆ ಬಂದಿದೆ. ಈ ರೀತಿ ಮುಂದುವರಿದರೆ ಜಿಲ್ಲಾಡಳಿತದಿಂದ ಮುಂದೆ ಯಾವುದೇ ಸಹಕಾರ ಸಿಗದು ಎಂಬುದನ್ನು ಅಸೋಶಿಯನ್‌ನವರಿಗೆ ಸ್ಪಷ್ಟಪಡಿಸಲಾಗಿದೆ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಮರಳಿನ ಕೊರತೆಯ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈಗಾಗಲೇ ಜಿಲ್ಲೆಯಲ್ಲಿ ಸಿಆರ್‌ಝೆಡೇತರ ವಲಯದಲ್ಲಿ 16 ಬ್ಲಾಕ್‌ಗಳಲ್ಲಿ ಟೆಂಡರ್ ಕರೆಯಲಾಗಿದೆ. 4 ಕಡೆ ಲೈವ್ ಬಿಡ್ಡಿಂಗ್ ಆಗಿದೆ. 18 ಕಡೆ ಎಸಿ ಹಂತದಲ್ಲಿದೆ. ಒಟ್ಟು 38 ಹೊಸ ಬ್ಲಾಕ್‌ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಬಿಡ್ಡುದಾರರು ಇಲ್ಲದಿದ್ದಲ್ಲಿ ಮರು ಟೆಂಡರ್ ಕರೆಯಲಾಗುವುದು. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಇನ್ನೂ ಅನುಮತಿ ದೊರಕಿಲ್ಲ ಎಂದು ಹೇಳಿದರು.
ಇಎಸ್‌ಐನಡಿ ಸಾಮಾನ್ಯ ಚಿಕಿತ್ಸೆಗೆ ತೊಂದರೆ :
ಇಎಸ್‌ಐನಡಿ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ. ರಾಜ್ಯ ಸರಕಾರದಿಂದ ನವೀಕರಣ ವ್ಯವಸ್ಥೆ ಆಗದ ಕಾರಣ ಇಎಸ್‌ಐ ಕಾರ್ಡ್ ಹೊಂದಿದವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಸಭೆಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಈ ಬಗ್ಗೆ ರಾಜ್ಯ ವೈದ್ಯಕೀಯ ಇಲಾಖೆಯ ಆಯುಕ್ತರ ಬಳಿ ಚರ್ಚಿಸುವುದಾಗಿ ತಿಳಿಸಿದರು.
ಕೂಳೂರು ಸೇತುವೆಗೆ ಮತ್ತೊಂದು ಡೆಡ್‌ಲೈನ್! :
ಕೂಳೂರು ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರಶ್ನಿಸಿದಾಗ, ಕಾಮಗಾರಿ ಆರಂಭಗೊಂಡಿರುವುದಾಗಿ ಅಧಿಕಾರಿಗಳು ಉತ್ತರಿಸಿದರು. ಅಡಿಪಾಯದ ಪ್ರಾಥಮಿಕ ಕೆಲಸಗಳು ಪೂರ್ಣಗೊಂಡಿವೆ. ಪೈಲ್ ಕ್ಯಾಪ್ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿಯೊಳಗೆ ಕಾಮಗಾರಿ ಮುಗಿದು ಸರ್ವಿಸ್ ರಸ್ತೆ ಕಾಮಗಾರಿಯ ಬಳಿಕ ಮಾರ್ಚ್‌ನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಕಾಮಗಾರಿಗೆ ಹಣದ ಕೊರತೆ ಇಲ್ಲ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಸಭೆಯಲ್ಲಿ ಮಾಹಿತಿ ನೀಡಿದರು.
ಮೂರು ಪಾಳಿಯಲ್ಲಿ ಕಾಮಗಾರಿ ನಡೆದರೆ ಮಾತ್ರವೇ ಮಾರ್ಚ್‌ನಲ್ಲಿ ಮುಗಿಸಲು ಸಾಧ್ಯ. ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಸೂಚಿಸಿದರು.
ಪೆರಿಯ ಶಾಂತಿಯಿಂದ ಬಿ.ಸಿ.ರೋಡ್‌ವರೆಗಿನ 48.485 ಕಿ.ಮೀ. ಹೆದ್ದಾರಿಯಲ್ಲಿ 43.1 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ 2026ರ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ. ನೀರಕಟ್ಟೆಯಲ್ಲಿ ಬಂಡೆಯನ್ನು ಒಡೆಯುವ ಕೆಲಸ ಆಗಬೇಕಾಗಿದೆ. ಈ ಬಗ್ಗೆ ಸ್ಥಳೀಯರಿಂದ ಆಕ್ಷೇಪವಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಬಂಡೆ ತೆರವು ತ್ವರಿತವಾಗಿ ಪೂರ್ಣಗೊಳಿಸಲು ಪುತ್ತೂರು ಎಸಿ ಮಧ್ಯ ಪ್ರವೇಶಿಸುವಂತೆ ಸಂಸದರು ಸಲಹೆ ನೀಡಿದರು.
ಮಹಾಕಾಳಿಪಡ್ಪು ಕೆಳಸೇತುವೆ ಡಿಸೆಂಬರ್‌ಗೆ ಪೂರ್ಣ :
ಮಹಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿ ವಿಳಂಬಗೊಂಡಿರುವ ಬಗ್ಗೆ ಶಾಸಕರಾದ ವೇದವ್ಯಾಸ ಕಾಮತ್ ಪ್ರಶ್ನಿಸಿದಾಗ, ಕಾಮಗಾರಿ ಡಿ.20ರೊಳಗೆ ಪೂರ್ಣಗೊಳ್ಳಲಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ ಉತ್ತರಿಸಿದರು.
ಈ ರೈಲ್ವೇ ಕೆಳಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ 2022ರಲ್ಲಿ ಕರಾವಳಿ ವೃತ್ತ- ಮಹಾವೀರ ವೃತ್ತದ (ಪಂಪ್‌ವೆಲ್)ವರೆಗಿನ ರಸ್ತೆ ಕಾಮಗಾರಿ ಅನುಷ್ಟಾನ ಸಾಧ್ಯವಾಗುತ್ತಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ಷೇಪಿಸಿದರು.
ರೈಲ್ವೇ ಇಲಾಖೆಯ ಡಿಆರ್‌ಎಂ ದರ್ಜೆಯ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆಸಲು ರೈಲ್ವೇ ಸಚಿವರೇ ಸೂಚಿಸಿದ್ದರೂ ಸಭೆ ನಡೆಯುತ್ತಿಲ್ಲ. ಈ ಬಗ್ಗೆ ಸಚಿವಾಲಯಕ್ಕೆ ದೂರು ನೀಡಬೇಕಾಗುತ್ತದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಎಚ್ಚರಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಕರ್ಬಾರಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸ ಸರ್ವಿಸ್ ರಸ್ತೆ, ಪಾದಾಚಾರಿ ಸೇತುವೆ ಪ್ರಸ್ತಾವನೆ :
ದ.ಕ. ಜಿಲ್ಲೆಯ ಮುಲ್ಕಿಯಲ್ಲಿ 500 ಮೀಟರ್, ಪಡುಪಣಂಬೂರು ಬಳಿ 310 ಮೀಟರ್, ಹಳೆಯಂಗಡಿಯಲ್ಲಿ 550 ಮೀಟರ್ ಹಾಗೂ ಬೀರಿಯಲ್ಲಿ 700 ಮೀಟರ್ ಉದ್ದದ ಸರ್ವಿಸ್ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರಸ್ತಾವಿಸಲಾಗಿದೆ. ಇದೇ ವೇಳೆ ಮುಲ್ಕಿ ಬಪ್ಪನಾಡು ದೇವಸ್ಥಾನದ ಬಳಿ, ಮುಕ್ಕ ಶ್ರೀನಿವಾಸ ಕಾಲೇಜು ಬಳಿ ಹಾಗೂ ಗೋರಿಗುಡ್ಡಗಳಲ್ಲಿ ಪಾದಾಚಾರಿ ಸೇತುವೆಗಳನ್ನು ನಿರ್ಮಿಸಲು ಪ್ರಸ್ತಾವಿಸಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.
ಸುರತ್ಕಲ್- ಮಂಗಳೂರು- ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿಯು ಪ್ರಸ್ತುತ ನವಮಂಗಳೂರು ಬಂದರು ರಸ್ತೆ ಕಂಪನಿ ಅಧೀನದಲ್ಲಿದೆ. ಇದರ ನಿರ್ವಹಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುದಾನ ಒದಗಿಸುತ್ತಿಲ್ಲ. ಈ ಹೆದ್ದಾರಿ ಶೀಘ್ರವೇ ಎನ್‌ಎಚ್‌ಎಐಗೆ ಹಸ್ತಾಂತರವಾಗಲಿದೆ. ಚತುಷ್ಪಥವಾಗಿ ಈ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಇದರಲ್ಲಿರುವ ಬ್ಲಾಕ್‌ಸ್ಪಾಟ್ ಸರಿಪಡಿಸಲು ಡಿಪಿಆರ್ ತಯಾರಿಸುವ ಏಜೆನ್ಸಿ ಗೊತ್ತುಪಡಿಸಲು ಟೆಂಡರ್ ಕರೆಯಲಾಗಿದೆ. ಇದರ ಅಭಿವೃದ್ಧಿಗೆ ಎಲ್ಲ ಪಾಲುದಾದರರ ಜತೆ ಚರ್ಚಿಸಿ ಯೋಜನೆ ರೂಪಿಸಲಾಗುತ್ತದೆ ಎಂದರು.







