ಮೂಡುಬಿದಿರೆ: 85ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ಗೆ ಚಾಲನೆ

ಮೂಡುಬಿದಿರೆ, ಜ.12: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಯೋಜಿಸಿರುವ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿವಿ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ ಸೋಮವಾರ ಆರಂಭಗೊಂಡಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ 6ನೇ ಬಾರಿಗೆ (72, 75, 80, 79 ಹಾಗೂ 81) ನಡೆಯುತ್ತಿರುವ ಕ್ರೀಡಾಕೂಟವನ್ನು ಉದ್ಘಾಟಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ‘ಆಳ್ವಾಸ್ ನಲ್ಲಿ ನಡೆಯುವ ಕ್ರೀಡಾಕೂಟವು ಜಾಗತಿಕ ಕೂಟದ ಮಾದರಿ. ದೇಶದ ಎಲ್ಲ ಕ್ರೀಡಾಕೂಟಗಳಿಗೂ ಹೆಗ್ಗುರುತು’ ಎಂದು ಶ್ಲಾಘಿಸಿದರು.
ಸತ್ ಪ್ರಜೆ ನಿರ್ಮಿಸುವ ಹಾಗೂ ಬಲಿಷ್ಠ ಭಾರತದ ನಿರ್ಮಾಣದ ಬುನಾದಿ ಈ ಕ್ರೀಡಾಕೂಟ ಎಂದ ಅವರು, ವಿದ್ಯಾರ್ಥಿಗಳೇ ದೇಶದ ಭವ್ಯ ಭವಿಷ್ಯ ಎಂದರು.
ಉದ್ಘಾಟನಾ ಸಂಕೇತವಾಗಿ ತ್ರಿವರ್ಣ ಬಲೂನುಗಳನ್ನು ಗಾಳಿಗೆ ಹಾರಿ ಬಿಡಲಾಯಿತು. ಕ್ರೀಡಾಜ್ಯೋತಿ ಬೆಳಗಿದ ಬಳಿಕ, ಕ್ರೀಡಾಪಟು ದೀಕ್ಷಿತಾ ರಾಮಕೃಷ್ಣ ಪ್ರತಿಜ್ಞಾ ವಿಧಿ ಬೋಧಿಸಿದರು.
ಸ್ಪೀಕರ್ ಯು.ಟಿ. ಖಾದರ್ ಕ್ರೀಡಾ ಒಕ್ಕೂಟದ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಭಗವಾನ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಧ್ವಜಾರೋಹಣಗೈದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಕೂಟದ ವೀಕ್ಷಕ ವಿ.ಶಂಕರ್ ಮಾತನಾಡಿ ಶುಭ ಹಾರೈಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಭಗವಾನ್ ಬಿ.ಸಿ., ಕುಲಸಚಿವ ಅರ್ಜುನ್, ಸಿಂಡಿಕೇಟ್ ಸದಸ್ಯ ಯು.ಟಿ.ಇಫ್ತಿಕಾರ್ ಅಲಿ, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ದೇಶದ 304ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳ ನಾಲ್ಕು ಸಾವಿರಕ್ಕೂ ಅಧಿಕ ಅತ್ಲೀಟ್‌ಗಳು ಹಾಗೂ ಸುಮಾರು 1,000 ಕ್ರೀಡಾಧಿಕಾರಿಗಳು ಪಾಲ್ಗೊಂಡಿದ್ದಾರೆ.
ಮನ ಸೆಳೆದ ಮೆರವಣಿಗೆ
ಭಾರತೀಯ ಕಲಾ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ ಮೆರವಣಿಗೆಯು, ಕ್ರೀಡಾಕೂಟದ ಉದ್ಘಾಟನೆಯಲ್ಲಿ ಗಮನ ಸಳೆಯಿತು. ಸಾಂಪ್ರದಾಯಿಕ ಕೊಂಬು ವಾದನ, ಗಣಪತಿ ಪ್ರತಿರೂಪ, ಕೊಡೆಗಳನ್ನು ಹಿಡಿದ ವಿದ್ಯಾರ್ಥಿನಿಯರು, ಘಟೋತ್ಕಜ ರೂಪ, ಊರಿನ ಚೆಂಡೆ, ಪೂರ್ಣಕುಂಭ ಹಿಡಿದ ಸ್ತ್ರೀಯರು, ಮಣಿಪುರ ಸಂಸ್ಕ್ರತಿ, ತಟ್ಟಿರಾಯ, ಕಿಂಗ್ಕಾಂಗ್, ಮರಗಾಲು, ತಮಟೆವಾದನ ಆಂಜನೇಯ, ಲಂಗದಾವಣಿ ಹುಡುಗಿಯರು, ರಾಮ, ಯಕ್ಷಗಾನ ವೇಷಧಾರಿಗಳು, ತೆಂಕು ಹಾಗೂ ಬಡಗು ಯಕ್ಷಗಾನ, ವರಾಹ, ಸ್ಯಾಕ್ಸೋಫೋನ್ ವಾದನ, ವೆಂಕಟರಮಣ, ಪುರುಷರ ನಗಾರಿ, ಮಹಿಳೆಯರ ನಗಾರಿ, ನರಸಿಂಹ, ದಪ್ಪು, ಹಿಮಕರಡಿ, ಡೊಳ್ಳುಕುಣಿತ, ನಂದಿ, ಕೊಂಚಾಡಿ ಚೆಂಡೆ, ಕಾಟಿ, ಬ್ಯಾಂಡ್ ಸೆಟ್, ಆಳ್ವಾಸ್ ಗೊಂಬೆ ಬಳಗ, ಶಿಲ್ಪಾ ಗೊಂಬೆ ಬಳಗ, ಹೊನ್ನಾವರ ಬ್ಯಾಂಡ್, ಏಂಜೆಲ್ಸ್, ಎಲ್ವ್ಸ್, ಸಂತಕ್ಲಾಸ, ನಾಸಿಕ್ ಬ್ಯಾಂಡ್, ಡೊಳ್ಳು ಕುಣಿತ, ಶಿಂಗಾರಿ ಮೇಳ, ಪಲ್ಲಕಿ, ಎನ್ಸಿಸಿಯ ಭೂ, ವಾಯು ಮತ್ತು ನೌಕಾಪಡೆ ಹಾಗೂ ಸ್ಕೌಟ್ಸ್ ಆ?ಯಂಡ್ ಗೈಡ್ಸ್, ರೋವರ್ಸ್ ಆಂಡ್ ರೇಂಜರ್ಸ್ ವಿದ್ಯಾರ್ಥಿಗಳ ಪಥಸಂಚಲನ ಮೆರುಗು ನೀಡಿದವು. ಟ್ರೋಫಿಯನ್ನು ಪಲ್ಲಕ್ಕಿಯಲ್ಲಿ ತರಲಾಯಿತು.
ಇದಕ್ಕೂ ಮೊದಲು ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ವಿಶ್ವವಿದ್ಯಾಲಯಗಳ ಕ್ರೀಡಾಪಟುಗಳ ಪಥಸಂಚಲನ ನಡೆಯಿತು. ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಗೌರವ ರಕ್ಷೆ ಸ್ವೀಕರಿಸಿದರು.
ಮಹಿಳಾ ಕಬಡ್ಡಿ ವಿಶ್ವಕಪ್ ವಿಜೇತ ಭಾರತೀಯ ತಂಡ ಪ್ರತಿನಿಧಿಸಿದ ಧನಲಕ್ಷ್ಮೀಯವರನ್ನು ಸನ್ಮಾನಿಸಲಾಯಿತು.
ಬಳಿಕ ಸಿಡಿಮದ್ದಿನ ಪ್ರದರ್ಶನವು ಆಗಸದಲ್ಲಿ ಚಿತ್ತಾರ ಮೂಡಿಸಿತು.
ರಾಜೇಶ್ ಡಿಸೋಜ, ವೇಣುಗೋಪಾಲ್, ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಗಳು:
‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2025-26’ ಕ್ರೀಡಾಕೂಟದ ಮೊದಲ ದಿನವಾದ ಸೋಮವಾರ ನಡೆದ ಪುರುಷರ ಮತ್ತು ಮಹಿಳೆಯರ 10 ಸಾವಿರ ಮೀಟರ್ಸ್ ಓಟದ ಸ್ಪರ್ಧೆ ನಡೆಯಿತು.
ಉಳಿದಂತೆ ಮಹಿಳಾ ಮತ್ತು ಪುರುಷರ ವಿಭಾಗದ 800 ಮೀ. ಓಟ, ತ್ರಿವಿಧ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಡಿಸ್ಕಸ್ ಥ್ರೋ, 400 ಮೀ. ಹರ್ಡಲ್ಸ್, 100 ಮೀ. ಓಟ, 4x400 ಮೀ. ರಿಲೇ ಸ್ಪರ್ಧೆಗಳ ಅರ್ಹತಾ ಸುತ್ತು ಹಾಗೂ ಸೆಮಿಫೈನಲ್ ನಡೆದವು.
ಫಲಿತಾಂಶ:
10,000 ಮೀಟರ್ಸ್ ಓಟ (ಪುರುಷ): ಗೌರವ್, ಮಹಾತ್ಮ ಜ್ಯೋತಿಬಾ ಫುಲೆ ವಿ.ವಿ (29:19.46)-1, ಆವ್ಕಾಶ್, ಎಂಡಿಯು ರೋಹ್ತಕ್ ವಿ.ವಿ. (29:19.91)-2, ಪ್ರಿನ್ಸ್ರಾಜ್ ಯಾದವ್, ಆದಿಕವಿ ಶ್ರೀಮಹರ್ಷಿ ವಿ.ವಿ. (29:21.40)-3,
10,000 ಮೀಟರ್ಸ್ ಓಟ (ಮಹಿಳೆ): ನಿರ್ಮಲಾ, ಮಂಗಳೂರು ವಿ.ವಿ. (34.47.20)-1, ರವಿನಾ ವಿಜಯ್ ಗಾಯಕವಾಡ್, ಸಾವಿತ್ರಿಬಾಯಿ ಫುಲೆ ವಿ.ವಿ ಪುಣೆ (34.48.07)-2, ಅಂಜಲಿ ದೇವಿ, ಲವ್ಲೀ ಪ್ರೊಫೆಷನಲ್ ವಿ.ವಿ. (34.49.54)-3
ಮೊದಲ ದಿನ ಚಿನ್ನ ಮುಡಿಗೇರಿಸಿದ ‘ಆಳ್ವಾಸ್’
ಇಲ್ಲಿನ ಸ್ವರಾಜ್ ಮೈದಾನದಲ್ಲಿ ಸೋಮವಾರ ಆರಂಭಗೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2025-26’ರ ಮೊದಲ ದಿನ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ ನಿರ್ಮಲಾ ಚಿನ್ನಕ್ಕೆ ಮುತ್ತಿಕ್ಕಿದರು.
10 ಸಾವಿರ ಮೀ. ಓಟದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ ಪ್ರಥಮ ಸ್ಥಾನ ಗಳಿಸಿದರು.







