ಮೂಡುಬಿದಿರೆ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ಟೆರ್ ಲೈಟ್ ಕಂಪೆನಿಯ ವಿರುದ್ಧ ಪ್ರತಿಭಟನೆ

ಮೂಡುಬಿದಿರೆ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿದ್ಯುತ್ ಪ್ರಸರಣಾ ಲೈನ್ ( 400 ಕೆ.ವಿ, UTKL) ಕಾಮಗಾರಿಯ ಗುತ್ತಿಗೆ ಪಡೆದಿರುವ ಸ್ಟೆರ್ ಲೈಟ್ ಕಂಪೆನಿಯು ತಾಲೂಕಿನ ಕೆಲವೆಡೆ ರೈತರಿಗೆ ಅನ್ಯಾಯವೆಸಗುತ್ತಿದ್ದು, ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಕೇಂದ್ರ ಸರಕಾರದ ಪವರ್ ಇದೆಯೆಂದು ತೋರಿಸಲು ಮುಂದಾದರೆ ನಾವು ನಮ್ಮ ಪವರ್ ತೋರಿಸಿ ಸ್ಟೆರ್ ಲೈಟ್ ಕಂಪೆನಿಯನ್ನು ಆಂಧ್ರಪ್ರದೇಶಕ್ಕೆ ವಾಪಾಸು ಕಳುಹಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಎಚ್ಚರಿಸಿದ್ದಾರೆ.
ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ಟೆರ್ ಲೈಟ್ ಕಂಪೆನಿಯ ವಿರುದ್ಧ ಶುಕ್ರವಾರ ಆಡಳಿತ ಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿಯ ಮುಖಂಡರೊಬ್ಬರು ಹಸಿರು ಶಾಲು ಹಾಕಿಕೊಂಡು ರೈತ ಮುಖಂಡ ಎಂದು ಪೋಸು ನೀಡಿ ಅಮಾಯಕ ರೈತರೊಂದಿಗೆ ನಾಟಕ ಮಾಡುತ್ತಿದ್ದಾರೆ. ಹಸಿರು ಶಾಲು ಹಾಕಿದ ಮಾತ್ರಕ್ಕೆ ರೈತ ಮುಖಂಡನಾಗುವುದಿಲ್ಲ. ರೈತರು ಇಂಥವರ ನಾಟಕವನ್ನು ಅರ್ಥ ಮಾಡಿಕೊಳ್ಳಬೇಕು. ಇವರಿಗೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ' ಎಂದರು.
ಅಕ್ರಮ ಸಕ್ರಮ ಸಮಿತಿ, ಕೆಡಿಪಿ, ಆಶ್ರಯ ಮುಂತಾದ ಸಮಿತಿಗಳು ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದೆ. ಅದರ ಅಧ್ಯಕ್ಷರಾಗಿರುವ ಶಾಸಕರು ಒಮ್ಮೆಯೂ ಒಂದೇ ಒಂದು ಮೀಟಿಂಗ್ ಮಾಡಿಲ್ಲ. ಇದರಿಂದಲೇ ಅವರಿಗೆ ಬಡವರ ಮೇಲೆ, ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತದೆ. ಶಾಸಕರಿಗೆ ಹತ್ತು ದಿವಸಗಳ ಗಡುವು ನೀಡುತ್ತೇವೆ. ಅದರೊಳಗೆ ಮೀಟಿಂಗ್ ಮಾಡದಿದ್ದರೆ ಅವರ ಕಚೇರಿಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ ಎಂದೂ ಎಚ್ಚರಿಸಿದರು.
ಮಾಜಿ ಸಚಿವ ಕೆ.ಅಭಯಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪ್ರಮುಖರಾದ ಮಿತ್ತಬೈಲು ವಾಸುದೇವ ನಾಯಕ್, ರಮೇಶ್ ಶೆಟ್ಟಿ ಪಡುಮಾರ್ನಾಡು,ಚಂದ್ರಹಾಸ ಸನಿಲ್, ಟಿ.ಎನ್.ಕೆಂಬಾರೆ, ಶೌಕತ್ ಬೆಳುವಾಯಿ, ಅಬ್ದುಲ್ ಲತೀಫ್,ಜೊಸ್ಸಿ ಮಿನೇಜಸ್,ಶಶಿಧರ ಎಂ, ಹರೀಶ್ ಆಚಾರ್ಯ,ರುಕ್ಕಯ್ಯ ಪೂಜಾರಿ,ಇಕ್ಬಾಲ್ ಕರೀಮ್, ಅಲ್ತಾಫ್, ರತ್ನಾಕರ ಮೊಯ್ಲಿ,ಝಕರಿಯಾ ಯೂಸುಫ್, ರೀಟಾ ಕುಟಿನ್ಹೊ,ರೂಪಾ ಸಂತೋಷ್ ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ,ಪದ್ಮಪ್ರಸಾದ್ ಜೈನ್, ವಸೀರ್ ಪುತ್ತಿಗೆ, ಸಲಾಮ್ ಹೊಸಂಗಡಿ,ಜಾವೆದ್ ಹೊಸಂಗಡಿ,ಮರ್ವಿನ್ ಲೋಬೋ,ಮುರಳೀಧರ ಕೋಟ್ಯಾನ್, ಅಬೂಬಕ್ಕರ್ ಶಿರ್ತಾಡಿ, ಆಳ್ವಿನ್ ಮಿನೇಜಸ್, ಆಳ್ವಿನ್ ಡಿಸೋಜ, ಸತೀಶ್ ಕೊಡಂಗಲ್,ಸಂದೀಪ್ ಅಲಂಗಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







