ಮೂಡುಬಿದಿರೆ | ಪ್ರಾದೇಶಿಕ ಮಾಧ್ಯಮ-ಸಂಸ್ಕೃತಿ ಸೇವೆಗೆ ಡಾ.ಮಂದಾರ ರಾಜೇಶ್ ಭಟ್ ಗೆ ರಾಷ್ಟ್ರೀಯ ಗೌರವ

ಮೂಡುಬಿದಿರೆ : ಪ್ರಾದೇಶಿಕ ಪತ್ರಿಕೋದ್ಯಮ, ತುಳು–ಕನ್ನಡ ಸಂಸ್ಕೃತಿ ಸಂರಕ್ಷಣೆ ಮತ್ತು ಜನಪದ ಕಲೆಗಳ ಪ್ರಚಾರ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಮೂಡುಬಿದಿರೆ ಶಿರ್ತಾಡಿಯ ಡಾ. ಮಂದಾರ ರಾಜೇಶ್ ಭಟ್ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.
ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಮತ್ತು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ಇವರು ಜಂಟಿಯಾಗಿ ಘೋಷಿಸಿರುವ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ಪ್ರಶಸ್ತಿಗೆ ಡಾ. ಮಂದಾರ ರಾಜೇಶ್ ಭಟ್ಟರನ್ನು ಆಯ್ಕೆ ಮಾಡಲಾಗಿದೆ. ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಮಾಧ್ಯಮಗಳ ಸಮನ್ವಯಿತ ಸೇವೆಗಾಗಿ ದೇಶದ ಮಟ್ಟದಲ್ಲಿ ಈ ಪ್ರಶಸ್ತಿಯು ಲಭಿಸಿದೆ.
ಸಾಂಸ್ಕೃತಿಕ-ಸಾಮಾಜಿಕ ವಲಯಕ್ಕೆ ಕೊಡುಗೆ :
ಡಾ. ಮಂದಾರ ರಾಜೇಶ್ ಭಟ್ಟರು ಪ್ರಾದೇಶಿಕ ದಿನಪತ್ರಿಕೆಗಳು ಮತ್ತು ದ್ವಿಭಾಷಾ ವಾರಪತ್ರಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಾ ಬಂದಿದ್ದಾರೆ. ಜೊತೆಗೆ, ಸ್ಥಳೀಯ ದೃಶ್ಯ ಮಾಧ್ಯಮದಲ್ಲಿ ನಿರೂಪಣೆ ಮತ್ತು ವರದಿಗಾರಿಕೆಯ ಮೂಲಕ ಜನಸಾಮಾನ್ಯರನ್ನು ತಲುಪಿದ್ದಾರೆ. ಅನೇಕ ಪುಸ್ತಕಗಳ ಪ್ರಕಟಣೆ ಹಾಗೂ ಉಚಿತ ವಿತರಣೆ ಮೂಲಕ ಅವರು ದಕ್ಷಿಣ ಕನ್ನಡದ ಸಾಂಸ್ಕೃತಿಕ–ಸಾಮಾಜಿಕ ವಲಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾಗಿ, ಅವರು ತುಳು ಮತ್ತು ಕನ್ನಡ ಭಾಷೆಯ ಪಾರಂಪರಿಕ ಶೈಲಿಯ “ಮಂದಾರ ರಾಮಾಯಣ” ಮಹಾಕಾವ್ಯದ ಸುಗಿಪು–ದುನೀಪು, ವಾಚನ–ವ್ಯಾಖ್ಯಾನ ಪ್ರಸಾರ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಸ್ಥಳೀಯ ಸಾಹಿತ್ಯ ಪರಂಪರೆಯ ಸಂರಕ್ಷಣೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಅದರೊಂದಿಗೆ, ತುಳು ಭಾಷೆಯಲ್ಲಿ ಶ್ರೀಕೃಷ್ಣನ ಬಾಲ್ಯ ಲೀಲೆಗಳನ್ನು ಒಳಗೊಂಡಿರುವ “ಬೀರದ ಬೊಲ್ಪು” ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಮಕ್ಕಳಿಗೂ ಹಿರಿಯರಿಗೂ ತುಳು ಸಂಸ್ಕೃತಿ ತಲುಪುವಲ್ಲಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿಂದೆ, ಅವರ ಮಾಧ್ಯಮ ಸೇವೆ ಮತ್ತು ಪರಿಸರ ಸಂರಕ್ಷಣೆಯ ಕಾಯಕವನ್ನು ಗುರುತಿಸಿ ಇಂಡಿಯನ್ ಅಂಪಯರ್ ಯುನಿವರ್ಸಿಟಿ ಹಾಗೂ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ ಅವರಿಗೆ “ಗೌರವ ಡಾಕ್ಟರೇಟ್” ನೀಡಿ ಸನ್ಮಾನಿಸಲಾಗಿತ್ತು.







