ಮೂಡುಬಿದಿರೆ | ಮಾದಕ ವಸ್ತು ಸಾಗಾಟ ಆರೋಪ: ರೌಡಿ ಶೀಟರ್ ನ ಬಂಧನ

ತೌಸೀಫ್
ಮೂಡುಬಿದಿರೆ: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್ ಓರ್ವನನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ಕೊಡಂಗಲ್ಲು ಎಂಬಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.
ಬಂಧಿತನನ್ನು ಕಲ್ಲಡ್ಕ ನಿವಾಸಿ ತೌಸೀಫ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತನಿಂದ ಸುಮಾರು 50ಸಾವಿರ ರೂ. ಮೌಲ್ಯದ 10.800 ಗ್ರಾಂ ತೂಕದ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಸುಮಾರು 3ಲಕ್ಷ ರೂ.ಮೌಲ್ಯದ ಕಾರು, ಈತನ ಕಾರಿನಲ್ಲಿ ಪತ್ತೆಯಾಗಿದ್ದ ತಲವಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಿಂದ ಕೊಡಂಗಲ್ಲು - ಮಹಾವೀರ ಕಾಲೇಜು ಮಾರ್ಗವಾಗಿ ಮಂಗಳೂರಿಗೆ ಎಂಡಿಎಂಎ ಸಹಿತ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರಿಗೆ ಮಾಹಿತಿ ದೊರೆತಿತ್ತು. ಅದರಂತೆ ಆತನ ಕಾರು ನಿಲ್ಲಿಸಿ ಬಂಧಿಸಲು ಹೋಗಿದ್ದ ಸಂದರ್ಭ ಆರೋಪಿಯು ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಸರಕಾರಿ ವಾಹನದಲ್ಲಿ ಬೆನ್ನು ಹತ್ತಿ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ತಡೆದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 5 ಪ್ರಕರಣಗಳು ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಯ ವಿರುದ್ಧ ಮೂಡಬಿದಿರೆ ಅಪರಾಧ ಕ್ರಮಾಂಕ 200/2025 ಕಲಂ 8(c), 22(c) ಎನ್ ಡಿಪಿಎಸ್ ಕಾಯ್ದೆ 3, 25(1B)(a) Arms Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







