ಮೂಡುಬಿದಿರೆ | ಪ್ರತಿಯೊಬ್ಬರು ನೇತ್ರ ತಪಾಸಣೆ ಮಾಡಿಕೊಳ್ಳುವುದು ಅಗತ್ಯ : ಶರತ್ ಡಿ.ಶೆಟ್ಟಿ

ಮೂಡುಬಿದಿರೆ: ಪ್ರತಿಯೊಬ್ಬರು ನೇತ್ರ ತಪಾಸಣೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದ್ದು, ಇದರಿಂದ ಆಟೋ ಚಾಲಕರು ಹೊರತಲ್ಲ. ಇಂತಹ ಶಿಬಿರಗಳು ನಡೆದಾಗ ಅದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಕೀಲ, ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಶರತ್ ಡಿ.ಶೆಟ್ಟಿ ಹೇಳಿದರು.
ಅವರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮೂಡುಬಿದಿರೆ, ಒನ್‌ಸೈಟ್, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮೂಡುಬಿದಿರೆ ಆಟೋರಿಕ್ಷಾ ಮಾಲಕ ಚಾಲಕರ ಸಂಘ, ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಟೋ ಚಾಲಕ ಮಾಲಕರಿಗಾಗಿ ಸಮಾಜಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸಾದ್ ನೇತ್ರಾಲಯದ ಹಿರಿಯ ನೇತ್ರ ತಜ್ಞೆ ಡಾ.ಸ್ಮೃತಿ ನೇತ್ರದಾನ ಮಹತ್ವವನ್ನು ತಿಳಿಸಿದರು. ಪ್ರಸಾದ್ ನೇತ್ರಾಲಯದ ಅಭಿವೃದ್ಧಿ ಅಧಿಕಾರಿಯಂತಹ ಅಬ್ದುಲ್ ಖಾದರ್ ಅವರು ಕಣ್ಣಿನ ಆರೋಗ್ಯದ ಕುರಿತು ಮಾತನಾಡಿದರು.
ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು ಮಾತನಾಡಿ, ಪ್ರಸಾದ್ ನೇತ್ರಾಲಯವು ಹಲವು ಟ್ರಸ್ಟ್ ಗಳ ಜೊತೆ ಜಂಟಿಯಾಗಿ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ರಿಯಾಯಿತಿ ದರದಲ್ಲಿ ಕಣ್ಣಿನ ಪೊರೆ ಚಿಕಿತ್ಸೆಯನ್ನು ಒದಗಿಸುತ್ತಿದೆ. ಕಣ್ಣಿನ ಸಮಸ್ಯೆ ಇರುವ ಎಲ್ಲಾ ಚಾಲಕರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನೇತ್ರ ತಜ್ಞರಾದ ಡಾ. ಕ್ರೀನಾ ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ನಿರೂಪಿಸಿದರು.
150 ಮಂದಿ ಆಟೋ ಚಾಲಕರ ತಪಾಸಣೆ ನಡೆಸಲಾಯಿತು. 27 ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ 10 ಮಂದಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. 80 ಮಂದಿ ಉಚಿತ ಕನ್ನಡಕ ಶಿಫಾರಸು ಮಾಡಲಾಯಿತು.







