ಮೂಡುಬಿದಿರೆ | ಕಾಲೇಜ್ ಕ್ಯಾಂಪಸ್‌ನಲ್ಲಿ ಕಾರ್ಮಿಕನ ಕೊಲೆ ಪ್ರಕರಣ: ಆರೋಪ ಸಾಬೀತು

ಮಂಗಳೂರು, ನ.11: ಮೂಡುಬಿದಿರೆಯ ಕಾಲೇಜೊಂದರ ಕ್ಯಾಂಪಸ್‌ನಲ್ಲಿ ನಡೆದ ಕಾರ್ಮಿಕನ ಕೊಲೆ ಪ್ರಕರಣವು ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ನ.13ಕ್ಕೆ ಘೋಷಿಸಲಾಗುವುದು ಎಂದು ನ್ಯಾಯಾಧೀಶರು ಪ್ರಕಟಿಸಿದರು.
ಪ್ರಕರಣ ವಿವರ :
2020ರ ಅ.10ರಂದು ಮಧ್ಯರಾತ್ರಿ 12:30ಕ್ಕೆ ಮೂಡುಬಿದಿರೆಯ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದ ಪರಶು ನಾಯ್ಕ ಎಂಬಾತನು ಚೇತನ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ ಹಿಡಿದುಕೊಂಡು ಕಾಲೇಜಿನ ವಿಶ್ರಾಂತಿ ಕೊಠಡಿಗೆ ಅಕ್ರಮ ಪ್ರವೇಶ ಮಾಡಿದ್ದ. ಹಾಗೇ ನಿದ್ರಿಸುತ್ತಿದ್ದ ಚೇತನ್‌ಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದ. ಗಂಭೀರ ಗಾಯಗೊಂಡ ಚೇತನ್ ನ.9ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಕ್ಷಿ ಜಗದೀಶ ವಿ.ಎನ್. ಸಮಗ್ರ ವಿಚಾರಣೆ ನಡೆಸಿ ಐಪಿಸಿ ಕಲಂ 448, 506, 302, 201ರಂತೆ ಆರೋಪಿ ತಪ್ಪಿತಸ್ಥನೆಂದು ಮಂಗಳವಾರ ತೀರ್ಪು ನೀಡಿ ನ.13ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಅಭಿಯೋಜನೆಯ ಪರ ಜ್ಯೋತಿ ಪ್ರಮೋದ ನಾಯಕ್ ವಾದಿಸಿದ್ದರು. ಪೊಲೀಸ್ ನಿರೀಕ್ಷಕ ಬಿ.ಎಸ್. ದಿನೇಶ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.





