ಮೂಡುಬಿದಿರೆ | ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ : ಶಾಸಕ ಉಮಾನಾಥ ಎ.ಕೋಟ್ಯಾನ್

ಮೂಡುಬಿದಿರೆ : ಜಗತ್ತಿನ ಶ್ರೇಷ್ಠ ಮತ್ತು ಪವಿತ್ರವಾದ ಸಂವಿಧಾನ ವಿದ್ದರೆ ಅದು ಭಾರತದ ಸಂವಿಧಾನ ಮಾತ್ರ. ನಮ್ಮ ಸಂವಿಧಾನಕ್ಕೆ ನಾವು ಗೌರವವನ್ನು ನೀಡಬೇಕು, ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಓದಿ ತಿಳಿದುಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಅವರು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಸಮಾಜ ಕಲ್ಯಾಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದರು.
ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಮಾತನಾಡಿ, ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಇಚ್ಛೆ ಇಟ್ಟಿರುವಿರೋ ಅದಕ್ಕಿಂತ ಮೊದಲು ಸಂವಿಧಾನದ ಮೂಲ ಆಶಯಗಳನ್ನು ತಿಳಿದುಕೊಳ್ಳಬೇಕು. ಜನಪರ ಕಾಳಜಿ, ಸಮಾಜಮುಖಿ ಚಿಂತನೆ ದೀನ ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ವಿಶೇಷ ಆದ್ಯತೆಯಲ್ಲಿ ಸೇವೆ ನೀಡಬೇಕು ಎಂದ ಅವರು, ಸಮಗ್ರ ಹಾಗೂ ಸದೃಢ ಕಟ್ಟಲು ಸಂವಿಧಾನವನ್ನು ಸರಿಯಾಗಿ ಅಥೈ೯ಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶ್ರೀ ಮಹಾವೀರ ಕಾಲೇಜಿನ ಉಪನ್ಯಾಸಕಿ ಪದ್ಮಶ್ರೀ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂವಿಧಾನದ ಬಗ್ಗೆ ಮಾತನಾಡಿದರು.
ಸನ್ಮಾನ :
ಮೂಡುಬಿದಿರೆ ತಾಲೂಕಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಬೆಟ್ಟುವಿನ ಅಪೂರ್ವ, ಚಿತ್ರಕಲೆ ಸ್ಪರ್ಧೆಯಲ್ಲಿ ಬಿ.ಆರ್.ಪಿ ಯ ಸಾನ್ವಿ, ನಿಲಿಮಾ ಜೆನವಿವ್ ಫೆರ್ನಾಂಡಿಸ್ ಹಾಗೂ ಜೈನ ಪ್ರೌಢಶಾಲೆಯ ಸಮರ್ಥ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ರಾಜೇಶ್ ಕಡಲಕೆರೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಪುತ್ರನ್, ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಉಪಸ್ಥಿತರಿದ್ದರು.
ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು.
ಉಪ ತಹಶೀಲ್ದಾರ್ ರಾಮ ಕೆ. ಸಂವಿಧಾನ ಪೀಠಿಕೆ ಓದಿದರು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು.







