ಮೂಡುಬಿದಿರೆ | ದನಗಳ ಅಕ್ರಮ ಸಾಗಾಟ ಆರೋಪ: ಮೂವರ ಬಂಧನ

ಸಾಂದರ್ಭಿಕ ಚಿತ್ರ
ಮೂಡುಬಿದಿರೆ: ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮನ್ಸೂರ್ ಅದ್ಯಪಾಡಿ ಯಾನೆ ಮುಹಮ್ಮದ್ ಮನ್ಸೂರ್, ಮುಹಮ್ಮದ್ ಅಶ್ವಾದ್, ಅಬ್ದುಲ್ ಮುಹಮ್ಮದ್ ನಿಶಾಮ್ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಅ.15ರ ಸಂಜೆ ಮೂಡುಬಿದಿರೆ ತಾಲೂಕಿನ ಹೊಸ್ಮಾರು ನೆಲ್ಲಿಕಾರು ಕಡೆಯಿಂದ ಗೂಡ್ಸ್ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ದನಗಳು, ವಾಹನ ಸಹಿತ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಮನ್ಸೂರ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 29 ಪ್ರಕರಣಗಳಿದ್ದು, ಇದು 30ನೇ ಪ್ರಕರಣವಾಗಿದೆ. ಮತ್ತೋರ್ವ ಆರೋಪಿ ಮುಹಮ್ಮದ್ ಅಶ್ವಾದ್ ನ ಮೇಲೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣ ದಾಖಲಾಗಿದ್ದು, ಇದು 2ನೇ ಪ್ರಕರಣವಾಗಿರುತ್ತದೆ. ಹಾಗೂ 3ನೇ ಆರೋಪಿ ಅಬ್ದುಲ್ ಮುಹಮ್ಮದ್ ನಿಶಾಮ್ ನ ವಿರುದ್ದ ಇದು ಮೊದಲನೇ ಪ್ರಕರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.







