ಮೂಡುಬಿದಿರೆ | ಕಾಂತಾವರ ಕನ್ನಡ ಸಂಘದ ನಾಲ್ಕು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ 2025ನೇ ಸಾಲಿನ ನಾಲ್ಕು ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಸರಸ್ವತಿ ಬಲ್ಲಾಳ್ ಮತ್ತು ಡಾ.ಸಿ.ಕೆ.ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಅವರಿಗೆ, ಧಾರವಾಡದ ಹಿರಿಯ ಸಾಹಿತಿ ಡಾ.ಜಿ.ಎಂ. ಹೆಗಡೆ ಅವರ ದತ್ತಿನಿಧಿಯ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ಹಿರಿಯ ವಿದ್ವಾಂಸರೂ, ನಿವೃತ್ತ ಪ್ರಾಧ್ಯಾಪಕರೂ ಆಗಿರುವ ಬೆಂಗಳೂರಿನ ಡಾ.ಆರ್. ಲಕ್ಷ್ಮೀ ನಾರಾಯಣ ಅವರಿಗೆ, ಸಂಘದ ವಾರ್ಷಿಕ ‘ಶ್ರೇಷ್ಠ ಪತ್ರಕರ್ತ’ ಪ್ರಶಸ್ತಿಯನ್ನು ಪರ್ತ್ರಕರ್ತ ಮತ್ತು ಸಾಹಿತಿಯಾಗಿರುವ ಶ್ರೀ ಲಕ್ಷ್ಮಣ್ ಕೊಡಸೆ ಅವರಿಗೆ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿ.ಬಾಲಕೃಷ್ಣ ಆಚಾರ್ ದಂಪತಿಗಳ ದತ್ತಿನಿಧಿಯ ‘ಶ್ರೇಷ್ಠ ಶಿಕ್ಷಕ ಸೌರಭ’ ಪ್ರಶಸ್ತಿಯನ್ನು ರಾಷ್ಟ್ರ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶಳ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಅವರಿಗೆ ನೀಡಲಾಗುವುದೆಂದು ನಿರ್ಣಯಿಸಲಾಗಿದೆ.
ಪ್ರಶಸ್ತಿಯು ತಲಾ 10ಸಾವಿರ ರೂಪಾಯಿಗಳ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನಗಳನ್ನು ಒಳಗೊಂಡಿದ್ದು, ಡಿ.28ರಂದು ನಡೆಯುವ ‘ಸಂಘದ ಐವತ್ತರ ಸಂಭ್ರಮದ ದ್ವಿತೀಯ ಕಾರ್ಯಕ್ರಮ’ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಪ್ರದಾನಿಸಲಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





