ಕೆಡಿಎಂ- ಎಫ್‌ಕೆಸಿಸಿಐ ನಡುವೆ ʼಎಂಒಯುʼ

ಮಂಗಳೂರು, ಡಿ.24: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಸಂಸ್ಥೆಗಳು ಜಿಲ್ಲಾ ಮಟ್ಟದ ಮತ್ತು ಕ್ಲಸ್ಟರ್ ಮಟ್ಟದ ಅಭಿವೃದ್ಧಿಯ ಮೇಲೆ ಒತ್ತು ನೀಡಿ ಬೆಂಗಳೂರಿನಾಚೆಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಉದ್ದೇಶದ ತಿಳುಳಿಕೆ ಪತ್ರಕ್ಕೆ (ಎಂಒಯು) ಬುಧವಾರ ಸಹಿಹಾಕಿವೆ.
ಈ ಸಹಯೋಗದ ಮೂಲಕ ಎಫ್‌ಕೆಸಿಸಿಐಯ 30ಕ್ಕೂ ಹೆಚ್ಚು ಜಿಲ್ಲಾ ಚೇಂಬರ್‌ಗಳ ಜಾಲ ಮತ್ತು ಕೆಡಿಇಎಂಯ ಕ್ಲಸ್ಟರ್ ಆಧರಿತ ವ್ಯವಸ್ಥೆಯನ್ನು ಬಳಸಿಕೊಂಡು ಮಹಾನಗರಗಳಲ್ಲದ ಪ್ರದೇಶಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಗಳ ಡಿಜಿಟಲೀಕರಣ, ಸ್ಟಾರ್ಟಪ್ ಬೆಳವಣಿಗೆ, ಹೂಡಿಕೆ ಸಿದ್ಧತೆ ಮತ್ತು ಉದ್ಯಮ ಶೀಲತೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಲಾಗುವುದು. ಸಣ್ಣ ಉದ್ಯಮಗಳಿಗೆ ಹೆಚ್ಚಿನ
ಅವಕಾಶ ಒದಗಿಸುವ ನಿಟ್ಟಿನಲ್ಲಿ ಮುಂದುವರಿಯಲಾಗುತ್ತದೆ. ಈ ಸಂದರ್ಭ ಮಾತನಾಡಿರುವ ಕೆಡಿಇಎಂನ ಸಿಇಓ ಸಂಜೀವ್ ಕುಮಾರ್ ಗುಪ್ತಾ, ಕರ್ನಾಟಕದ ಡಿಜಿಟಲ್ ಬೆಳವಣಿಗೆಯು ಕೇವಲ ಕೆಲವು ಕೇಂದ್ರಗಳಿಗೆ ಸೀಮಿತವಾಗ ಬಾರದು. ರಾಜ್ಯ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆ ಬೆಳವಣಿಗೆ ಹೊಂದಬೇಕು. ಎಫ್‌ಕೆಸಿಸಿಐ ಜೊತೆಗಿನ ಈ ಪಾಲುದಾರಿಕೆಯು ನೀತಿ, ವ್ಯವಸ್ಥೆ ಅಭಿವೃದ್ಧಿ ಮತ್ತು ಉದ್ಯಮ ಭಾಗವಹಿಸುವಿಕೆಯನ್ನು ಜೋಡಿಸಿ ಈ ಉದ್ದೇಶ ಸಾಧನೆಗೆ ನಮಗೆ ಸಹಾಯ ಮಾಡಲಿದೆ. ಜಿಲ್ಲೆಗಳಲ್ಲಿ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹೂಡಿಕೆಗಳನ್ನು ಸಾಧ್ಯವಾಗಿಸುವುದು, ಉದ್ಯಮಶೀಲತೆಯನ್ನು ವೇಗಗೊಳಿಸುವುದು ಮತ್ತು ತಂತ್ರಜ್ಞಾನ ಆಧರಿತ ಬೆಳವಣಿಗೆ ಉಂಟಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಎಫ್‌ಕೆಸಿಸಿಐಯ ಅಧ್ಯಕ್ಷರಾದ ಉಮಾ ರೆಡ್ಡಿ ಅವರು, ಈ ಒಡಂಬಡಿಕೆಯು ಕರ್ನಾಟಕದ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಉದ್ಯಮಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡುತ್ತದೆ. ನಮ್ಮ ಜಿಲ್ಲಾ ಚೇಂಬರ್‌ಗಳು ಮತ್ತು ಸದಸ್ಯ ಜಾಲದ ಮೂಲಕ ಕೆಡಿಇಎಂನೊಂದಿಗೆ ಕೆಲಸ ಮಾಡಿ ಉದ್ಯಮಗಳು, ಸ್ಟಾರ್ಟಪ್‌ಗಳು ಮತ್ತು ಎಂಎಸ್‌ಎಂಇಗಳಿಗೆ ಹೂಡಿಕೆ, ಕೌಶಲ್ಯ ಮತ್ತು ಹೊಸ ಆವಿಷ್ಕಾರ ಅವಕಾಶಗಳನ್ನು ಹೊಂದುವ ಸಂಪರ್ಕ ಒದಗಿಸುತ್ತೇವೆ ಎಂದರು.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಮಾತನಾಡಿ, ರಾಜ್ಯಾದ್ಯಂತ ಸಮತೋಲಿತ ಡಿಜಿಟಲ್ ಬೆಳವಣಿಗೆಯನ್ನು ಆಗುಗೊಳಿಸುವ ಕರ್ನಾಟಕ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿ ಈ ಸಹಭಾಗಿತ್ವ ಮೂಡಿಬಂದಿದೆ ಎಂದರು.







