ಎಂಎಸ್‌ಎನ್‌ಐಎಂ-ರೋಟರಿ ಬಿಜ್ ಕ್ವಿಝ್: ಮಂಗಳೂರು ಬೆಸೆಂಟ್ ಸಂಧ್ಯಾ ಕಾಲೇಜು ಪ್ರಥಮ

ಮಂಗಳೂರು, ಜೂ.2: ಮಣೆಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ), ರೋಟರಿ ಕ್ಲಬ್ ಆಫ್ ಮಂಗಳೂರು ನಾರ್ತ್ ಸಹಯೋಗದೊಂದಿಗೆ ನಗರದ ಬೊಂದೇಲ್‌ನ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಮೇ 30ರಂದು ನಡೆದ ‘ಎಂಎಸ್‌ಎನ್‌ಐಎಂ-ರೋಟರಿ ಬಿಜ್ ಕ್ವಿಝ್ - 2025’ ವಾಣಿಜ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಸ್ಮಾ ಆಯತ್, ಆರಿಫಾ, ಅಶ್ಮಿತಾ ಇವರನ್ನು ಒಳಗೊಂಡ ಮಂಗಳೂರಿನ ಬೆಸೆಂಟ್ ಸಂಧ್ಯಾ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದಿದೆ.
ಉಡುಪಿಯ ಡಾ. ಜಿ. ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜು (ಹೃತಿಕಾ ಕೆ, ಧನ್ಯಶ್ರೀ, ರಕ್ಷಿತಾ, ಬಿ. ಶ್ರೀದೇವಿ ವಾರಂಬಳ್ಳಿ ಮತ್ತು ಗ್ರೀಷ್ಮಾ ) ದ್ವಿತೀಯ ಹಾಗೂ ಮಂಗಳೂರಿನ ಕೆನರಾ ಕಾಲೇಜು (ಶ್ರೀರಾಮ್ ಭಟ್, ಸುಮಂತ್ ಪೈ, ಪವನ್ ಪೈ, ತ್ರಿವಿಕ್ರಮ್ ಶೆಣೈ ಮತ್ತು ವೇದಾಂತ್ ನಾಯಕ್) ತೃತೀಯ ಸ್ಥಾನ ಪಡೆದಿವೆ.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 35 ಪದವಿ ಕಾಲೇಜುಗಳನ್ನು ಪ್ರತಿನಿಧಿಸಿದ್ದ 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಸಪ್ರಶ್ನೆಯ ಪ್ರಾಥಮಿಕ ಮೊದಲ ಸುತ್ತನ್ನು ಆಯಾ ಕಾಲೇಜುಗಳಲ್ಲಿ ನಡೆಸಲಾಯಿತು. ಪ್ರತಿ ಕಾಲೇಜಿನಿಂದ ಅಗ್ರ ಐದು ತಂಡಗಳನ್ನು ಎಂಎಸ್‌ಎನ್‌ಐಎಂ ನಲ್ಲಿ ನಡೆದ ಎರಡನೇ ಪ್ರಾಥಮಿಕ ಸುತ್ತಿಗೆ ಆಯ್ಕೆ ಮಾಡಲಾಯಿತು, ಇವುಗಳಲ್ಲಿ ಎಂಟು ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು.
ಮಣಿಪಾಲ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನ ಸಹಾಯಕ ಪ್ರಾಧ್ಯಾಪಕ ಸಚಿನ್ ಆರ್. ಚಂದ್ರ ಅವರು ಕ್ವಿಜ್‌ಮಾಸ್ಟರ್ ಆಗಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಂಗಳೂರು ಉತ್ತರ ರೋಟರಿ ಕ್ಲಬ್‌ನ ಅಧ್ಯಕ್ಷ ಮೋಹನ್ ನಾಯರ್ ಗೌರವ ಅತಿಥಿಯಾಗಿದ್ದರು. ಕಾರ್ಪೊರೇಷನ್ ಬ್ಯಾಂಕಿನ ಮಾಜಿ ಜನರಲ್ ಮ್ಯಾನೇಜರ್ ಕೆ.ವಿ. ರಾಘವ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಉತ್ತರ ರೋಟರಿ ಕ್ಲಬ್‌ನ ಚುನಾಯಿತ ಅಧ್ಯಕ್ಷ ಡಾ. ಅರುಣ್ ಕುಮಾರ್ ಶೆಟ್ಟಿ, ಕ್ಲಬ್ ಸದಸ್ಯ ಟಿ.ಜಿ. ಶೆಣೈ ಮತ್ತು ಎಂಎಸ್‌ಎನ್‌ಐಎಂ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧರಿ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಸಾಜು ಎಂ.ವಿ. ಕಾರ್ಯಕ್ರಮ ಸಂಯೋಜಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ದಿವ್ಯಾ ಆಚಾರ್ ಸ್ವಾಗತಿಸಿದರು. ರಸಪ್ರಶ್ನೆ ಸಹಾಯಕ ಪ್ರಾಧ್ಯಾಪಕಿ ಅರ್ಪಿತಾ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಅದಿತಿ ಕಾಮತ್ ವಂದಿಸಿದರು ಸಹಾಯಕ ಪ್ರಾಧ್ಯಾಪಕಿ ಮಾನಸಾ ನಿರೂಪಿಸಿದರು.