ಮತದಾರರ ಪಟ್ಟಿಯ ಮ್ಯಾಪಿಂಗ್‌ಗೆ ಸಹಕರಿಸಲು ಮುಹಮ್ಮದ್ ಮಸೂದ್ ಮನವಿ

ಮಂಗಳೂರು, ಜ.10: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ನೇ ಸಾಲಿನ ಮತದಾರರ ಪಟ್ಟಿಯನ್ನು 2025 ಪರಿಷ್ಕೃತ ಮತದಾರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ನಡೆಯುತ್ತಿದೆ. ಇದಕ್ಕೆ ಸಹಕರಿಸಲು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.
ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೆ ಅತಿ ಮಹತ್ವದ್ದಾಗಿದೆ. 2002ರ ಮತದಾರರಾಗಿದ್ದ ವಾಸಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಂಡ ಮತದಾರರು ಹಾಗೂ ಮದುವೆಯಾಗಿ ಬಂದವರು ಕಡ್ಡಾಯವಾಗಿ ಮ್ಯಾಪಿಂಗ್ ಕಾರ್ಯ ಮಾಡಿಸಿಕೊಳ್ಳಬೇಕು. ಈ ಹಿಂದೆ ವಾಸವಿದ್ದ ತಮ್ಮ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಭಾಗದ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಿಳಿದಿರಬೇಕು. ಒಂದು ವೇಳೆ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಈ ಮೊದಲು ನೀವು ವಾಸ್ತವಿದ್ದ ಸ್ಥಳದ ಮತದಾರರ ಪಟ್ಟಿಯಲ್ಲಿ ನಿಮ್ಮ ತಂದೆ ತಾಯಿಯ ಕ್ರಮ ಸಂಖ್ಯೆ ಅಥವಾ ಅಜ್ಜ ಅಜ್ಜಿಯ ಕ್ರಮ ಸಂಖ್ಯೆಯೊಂದಿಗೆ ಮಾಹಿತಿ ಒದಗಿಸಬೇಕು. ಈ ಎಲ್ಲ ಮಾಹಿತಿಯನ್ನು ನಿಮ್ಮ ಪ್ರದೇಶದ ಬೂತ್ ಲೆವೆಲ್ ಆಫೀಸರ್‌ಗೆ ಒಪ್ಪಿಸಿ ಅವರ ಮುಖಾಂತರ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಬಗ್ಗೆ ಎಲ್ಲಾ ಜಮಾಅತ್‌ನ ಮಸೀದಿಯ ಪದಾಧಿಕಾರಿಗಳು ಮುತುವರ್ಜಿ ವಹಿಸಿ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಸೂಚಿಸಿದ್ದಾರೆ.





